ವಾಷಿಂಗ್ಟನ್ : ಯುಎಸ್ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿರುವ ಕಮಲ ಹ್ಯಾರಿಸ್ 'ದುರ್ಗಾ ದೇವಿ' ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದಕ್ಕಾಗಿ, ಕಮಲಾ ಹ್ಯಾರಿಸ್ ಅವರ ಸೊಸೆ ಮೀನಾ ಹ್ಯಾರಿಸ್ ಕ್ಷಮೆ ಯಾಚಿಸಬೇಕೆಂದು ಯುಎಸ್ ಹಿಂದೂ ಸಂಘಟನೆಗಳು ಆಗ್ರಹಿಸಿವೆ.
ಮೀನಾ ಹ್ಯಾರಿಸ್ ಈಗಾಗಲೇ ತನ್ನ ಟ್ವೀಟ್ ಡಿಲಿಟ್ ಮಾಡಿದ್ದಾರೆ. 35 ವರ್ಷದ ಮೀನಾ ಹ್ಯಾರಿಸ್ ಮಕ್ಕಳ ಪುಸ್ತಕಗಳ ಲೇಖಕಿ ಮತ್ತು ಸಾಮಾಜಿಕ ಸಂಘಟನೆ ಫಿನಾಮಿನಲ್ ವುಮನ್ ಆ್ಯಕ್ಷನ್ ಕ್ಯಾಂಪೇನ್ ಸ್ಥಾಪಕರಾಗಿದ್ದಾರೆ.
ದುರ್ಗಾ ದೇವಿಯ ವ್ಯಂಗ್ಯ ಚಿತ್ರ ಟ್ವೀಟ್ ಮಾಡಿದ್ದು, ಜಾಗತಿಕವಾಗಿ ಹಿಂದೂಗಳನ್ನು ಕೆರಳಿಸಿದೆ ಎಂದು ಹಿಂದೂ ಅಮೆರಿಕನ್ ಫೌಂಡೇಶನ್‌ನ ಸುಹಾಗ್ ಎ ಶುಕ್ಲಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಹಿಂದೂ ಅಮೆರಿಕನ್ ಫೌಂಡೇಶನ್, ಧರ್ಮಕ್ಕೆ ಸಂಬಂಧಿಸಿದ ಚಿತ್ರಗಳ ವಾಣಿಜ್ಯ ಬಳಕೆಗಾಗಿ ಮಾರ್ಗಸೂಚಿಯನ್ನು ಹೊರಡಿಸಿದೆ.
ಇನ್ನು, ಈ ವಿವಾದಾತ್ಮಕ ಚಿತ್ರವನ್ನು ಮೀನಾ ಹ್ಯಾರಿಸ್ ಅಥವಾ ಬಿಡೆನ್ ಅಭಿಯಾನ ತಂಡ ರಚಿಸಿಲ್ಲ. ಅದು ವಾಟ್ಸ್ ಆ್ಯಪ್ ಮೂಲಕ ಹರಿದಾಡುತ್ತಿತ್ತು ಎಂದು ಹಿಂದೂ ಅಮೆರಿಕನ್ ರಾಜಕೀಯ ಕ್ರಿಯಾ ಸಮಿತಿಯ ರಿಷಿ ಭೂತಾಡಾ ಹೇಳಿದ್ದಾರೆ.
ಮೀನಾ ಹ್ಯಾರಿಸ್ ಟ್ವೀಟ್ ಡಿಲಿಟ್ ಮಾಡಿದ್ದರೂ, ಅವರು ಹಿಂದೂ ಸಮುದಾಯದ ಕ್ಷಮೆಯನ್ನು ಯಾಚಿಸಲೇ ಬೇಕು. ಬೇರೆ ಯಾರೇ ಈ ರೀತಿ ಮಾಡಿದರೂ ಕ್ಷಮೆ ಯಾಚಿಸಬೇಕು. ಅಮೆರಿಕದ ರಾಜಕೀಯದಲ್ಲಿ ನಮ್ಮ ಧರ್ಮದ ವಿಷಯಗಳನ್ನು ಬಳಸಬಾರದು. ಈ ಹಿಂದೆ, 2018 ರಲ್ಲಿ ಫೋರ್ಟ್ ಬೆಂಡ್ ಕೌಂಟಿ ಜಿಒಪಿ ತನ್ನ ಜಾಹಿರಾತಿನಲ್ಲಿ ಇದೇ ರೀತಿ ಮಾಡಿದಾಗಲೂ ನಾನು ಹೀಗೆ ಎಂದಿದ್ದೆ ಎಂದು ಎಂದು ಭೂತಾಡಾ ತಿಳಿಸಿದ್ದಾರೆ.
ಮೀನಾ ಹ್ಯಾರಿಸ್ ಟ್ವೀಟ್ ಮಾಡಿದ್ದ ವಿವಾದಾತ್ಮಕ ಫೋಟೋದಲ್ಲಿ, ದುರ್ಗಾದೇವಿಯಂತೆ ಚಿತ್ರಿಸಲಾದ ಕಮಲಾ ಹ್ಯಾರಿಸ್, ರಾಕ್ಷಸ ಮಹಿಷಾಷುರನ ವಾಹನ (ಎಮ್ಮೆ) ವನ್ನು ಕೊಲ್ಲುತ್ತಿರುವುದು ಕಾಣಬಹುದಾಗಿದೆ. ಚಿತ್ರದಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಅವರನ್ನು ದೇವತೆಯ ವಾಹನ ( ಸಿಂಹ ) ಎಂದು ಚಿತ್ರಿಸಲಾಗಿದೆ.