ಮಿಯಾಮಿ(ಅಮೆರಿಕ):ಪ್ರವಾಸಿಗರಿಗೆ ಅಚ್ಚುಮೆಚ್ಚಾಗಿರುವ ಅಮೆರಿಕದ ಫ್ಲೋರಿಡಾ ರಾಜ್ಯದ ಮಿಯಾಮಿ ಬೀಚ್ನಲ್ಲಿ ಹೆಲಿಕಾಪ್ಟರ್ ಪತನಗೊಂಡಿರುವ ಘಟನೆ ಶನಿವಾರ ನಡೆದಿದ್ದು, ಜನರಿದ್ದ ಸ್ಥಳದಿಂದ ಕೆಲವೇ ಕೆಲವು ಅಡಿಗಳ ದೂರದಲ್ಲಿ ಬಿದ್ದಿದೆ.
ಮಧ್ಯಾಹ್ನ ಸೌತ್ ಬೀಚ್ ಪ್ರದೇಶದಲ್ಲಿ ಘಟನೆ ನಡೆದ ಬಗ್ಗೆ ಮಾಹಿತಿ ಸಿಕ್ಕಿತ್ತು. ಇಬ್ಬರು ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ. ಅವರನ್ನು ಜಾಕ್ಸನ್ ಮೆಮೊರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಿಯಾಮಿ ಬೀಚ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಡಲತೀರದ ಜನರು ಹೆಲಿಕಾಪ್ಟರ್ ಸಮುದ್ರದಲ್ಲಿ ಪತನವಾಗುವ ದೃಶ್ಯವನ್ನು ಸೆರೆಹಿಡಿದಿದ್ದು, ಈ ವಿಡಿಯೋವನ್ನು ಮಿಯಾಮಿ ಬೀಚ್ ಪೊಲೀಸ್ ಇಲಾಖೆ ಹಂಚಿಕೊಂಡಿದೆ. ಮತ್ತೊಂದು ಟ್ವೀಟ್ನಲ್ಲಿ ಹೆಲಿಕಾಪ್ಟರ್ನಲ್ಲಿ ಮೂವರಿದ್ದರು ಎಂದು ತಿಳಿಸಿದ್ದು, ಮೂರನೇ ವ್ಯಕ್ತಿ ಯಾರು ಎಂಬುದು ಸ್ಪಷ್ಟವಾಗಿಲ್ಲ.
ಇದನ್ನೂ ಓದಿ:ರಷ್ಯಾ ದಾಳಿ ಬೆದರಿಕೆ: ಉಕ್ರೇನ್ ತೊರೆಯುವಂತೆ ತನ್ನ ನಾಗರಿಕರಿಗೆ ಜರ್ಮನಿ, ಫ್ರಾನ್ಸ್ ಮನವಿ
ಸದ್ಯಕ್ಕೆ ಬೀಚ್ ಬಳಿಯ ಹೊರಾಂಗಣ ಕೆಫೆಗಳು, ರೆಸ್ಟೋರೆಂಟ್‌ಗಳು ಮತ್ತು ಅಂಗಡಿಗಳನ್ನು ಮುಚ್ಚಲಾಗಿದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಘಟನಾ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದೆ.