ವಾಷಿಂಗ್ಟನ್(ಅಮೆರಿಕ):ರಷ್ಯಾದಿಂದ ಭಾರತ ಎಸ್-400 ಮಿಸೈಲ್ ಡಿಫೆನ್ಸ್ ಸಿಸ್ಟಮ್ ಖರೀದಿಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ವಿರೋಧಿ ನಡೆ ಅನುಸರಿಸುವ ರಾಷ್ಟ್ರಗಳ ಮೇಲೆ ವಿಧಿಸುವ CAATSA ಅಥವಾ ಕಾಟ್ಸಾ ಕಾಯ್ದೆಯನ್ನು ಭಾರತಕ್ಕೆ ವಿಧಿಸದಿರಲು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಮೆರಿಕ ಮಂಗಳವಾರ ಸ್ಪಷ್ಟನೆ ನೀಡಿದೆ.
ಭಾರತಕ್ಕೆ ಎಸ್ - 400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಹಸ್ತಾಂತರ ಮಾಡುವ ಕಾರ್ಯವನ್ನು ಈಗಾಗಲೇ ರಷ್ಯಾ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಭಾರತದ ಮೇಲೆ ಕಾಟ್ಸಾ ನಿರ್ಬಂಧಗಳನ್ನು ವಿಧಿಸದಂತೆ ಅಮೆರಿಕ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಸಂಸದರು ಬೈಡನ್ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಬೆನ್ನಲ್ಲೇ ಅಮೆರಿಕದ ವಿದೇಶಾಂಗ ಇಲಾಖೆ ಈ ರೀತಿಯ ಹೇಳಿಕೆ ಪ್ರಕಟಿಸಿದೆ.
ನಮ್ಮ ಪಾಲುದಾರ ರಾಷ್ಟ್ರಗಳು ರಷ್ಯಾದೊಂದಿಗೆ ಯಾವುದೇ ವಹಿವಾಟು ನಡೆಸದಂತೆ ನಾವು ನಿರ್ಬಂಧ ಹೇರಿದ್ದೇವೆ. ಭಾರತದ ವಿಚಾರದಲ್ಲಿ ಎಸ್ - 400 ವಿಚಾರಕ್ಕೆ ಬರುವುದಾದರೆ ನಾವಿನ್ನೂ ಸ್ಪಷ್ಟವಾಗಿದ್ದೇವೆ. ಭಾರತದ ಮೇಲೆ ನಿರ್ಬಂಧ ವಿಧಿಸುವ CAATSA ಕಾಯ್ದೆಯನ್ನು ಭಾರತದ ವಿಚಾರದಲ್ಲಿ ಮನ್ನಾ ಮಾಡಲು ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.
ಅಮೆರಿಕ ಸಂಸತ್ನ ಹಲವು ಸದಸ್ಯರು ಈ ಬಗ್ಗೆ ಕಾಳಜಿ ವಹಿಸಿದ್ದಾರೆ. ನಾವು ಭಾರತದೊಂದಿಗಿನ ಪಾಲುದಾರಿಕೆಯನ್ನು ಖಂಡಿತವಾಗಿಯೂ ಗೌರವಿಸುತ್ತೇವೆ. ಆಗಸ್ಟ್‌ನಲ್ಲಿ ವಿದೇಶಾಂಗ ಮಂತ್ರಿ ಜೈಶಂಕರ್ ಅವರೊಂದಿಗೆ ಚರ್ಚೆ ನಡೆಸಿದ್ದೇವೆ. ಕೆಲವು ವಿಚಾರಗಳ ಬಗ್ಗೆ ನೇರವಾಗಿ ಚರ್ಚೆ ನಡೆಸಲಾಗಿದೆ ಎಂದು ನೆಡ್ ಪ್ರೈಸ್ ಸ್ಪಷ್ಟನೆ ನೀಡಿದ್ದಾರೆ.