ಕರ್ನಾಟಕ

karnataka

ETV Bharat / international

ಜಾಗೃತರಾಗಿ! ಜಗತ್ತನ್ನೇ ಅಲುಗಾಡಿಸುತ್ತಿದೆ ಕೊರೊನಾ ಕಬಂಧಬಾಹು: ಈ ಅಂಕಿ-ಅಂಶಗಳನ್ನೊಮ್ಮೆ ಓದಿ..

ಜಗತ್ತಿನ ಒಟ್ಟು 176 ರಾಷ್ಟ್ರಗಳನ್ನು ವ್ಯಾಪಿಸಿರುವ ಕೊರೊನಾ ಕರಿನೆರಳಿಗೆ 27,334ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. 5 ಲಕ್ಷದ 96 ಸಾವಿರಕ್ಕೂ ಹೆಚ್ಚು ಪಾಸಿಟಿವ್​ ಪ್ರಕರಣಗಳು ದಾಖಲಾಗಿವೆ.

Global virus death
ಕೊರೊನಾ

By

Published : Mar 28, 2020, 8:30 AM IST

Updated : Mar 28, 2020, 9:32 AM IST

ನ್ಯೂಯಾರ್ಕ್​/ನವದೆಹಲಿ: ಸಾಂಕ್ರಾಮಿಕ ರೋಗ ಕೊರೊನಾ ವೈರಸ್​ ಜಗತ್ತನ್ನೇ ಮನೆಯಲ್ಲಿ ಕೂಡಿ ಹಾಕಿದೆ. ದಿನದಿಂದ ದಿನಕ್ಕೆ ಸೋಂಕಿತರು ಹಾಗೂ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರಲ್ಲಿ ಭೀತಿಯೂ ಹೆಚ್ಚಾಗುತ್ತಿದೆ.

ಒಟ್ಟು 27 ಸಾವಿರಕ್ಕೂ ಹೆಚ್ಚು ಸಾವು:

ಜಗತ್ತಿನ ಒಟ್ಟು 176 ರಾಷ್ಟ್ರಗಳನ್ನು ವ್ಯಾಪಿಸಿರುವ ಕೊರೊನಾ ಕರಿನೆರಳಿಗೆ 27,334ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. 5 ಲಕ್ಷದ 96 ಸಾವಿರಕ್ಕೂ ಹೆಚ್ಚು ಪಾಸಿಟಿವ್​ ಪ್ರಕರಣಗಳು ದಾಖಲಾಗಿವೆ. ವಿಪರ್ಯಾಸವೆಂದರೆ, ಇದರಲ್ಲಿ ಸಿಂಹಪಾಲು ಯುರೋಪ್​ ರಾಷ್ಟ್ರಗಳದ್ದು. ಯುರೋಪ್​ನಲ್ಲಿ ಒಟ್ಟು 3,05,851 ಪಾಸಿಟಿವ್​ ಕೇಸ್​ಗಳು ದಾಖಲಾಗಿದ್ದು, ಇದರಲ್ಲಿ 18,289 ಜನ ಸಾವನ್ನಪ್ಪಿದ್ದಾರೆ. ಸೋಂಕಿತರ ಸಂಖ್ಯೆ ಇಟಲಿಯಲ್ಲಿ 86,498 ಇದ್ದು, ಸ್ಪೇನ್​ನಲ್ಲಿ 64,059 ಕ್ಕೇರಿದೆ. ಇದರಲ್ಲಿ 9,444 ಆರೋಗ್ಯ ಸಿಬ್ಬಂದಿಗೂ ಸೋಂಕು ಹರಡಿದೆ ಎಂದು ಸ್ಪೇನ್​ ಹೇಳಿದೆ.

ಅಮೆರಿಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಒಂದು ಲಕ್ಷಕ್ಕೂ ಹೆಚ್ಚು:

ಕೊರೊನಾ ವಿರುದ್ಧದ ಹೋರಾಟದಲ್ಲಿ ವಿಶ್ವದ ದೊಡ್ಡಣ್ಣ ಕೂಡಾ ಹಿಂದೆ ಬಿದ್ದಿದೆ. ನಿನ್ನೆ ಅಂದರೆ ಮಾರ್ಚ್​ 27ರಂದು ಒಂದೇ ದಿನ ಸುಮಾರು 18,000 ಹೊಸ ಕೇಸ್​ ದಾಖಲಾಗಿದ್ದು, ಒಂದೇ ದಿನ 345 ಜನ ಸಾವನ್ನಪ್ಪಿದ್ದಾರೆ. ಈವರೆಗೆ ಸೋಂಕಿತರ ಸಂಖ್ಯೆ 1 ಲಕ್ಷಕ್ಕೂ ಹೆಚ್ಚಾಗಿದೆ. ಅಲ್ಲದೆ 1544 ಜನ ಸಾವನ್ನಪ್ಪಿದ್ದಾರೆ.

ನ್ಯೂಯಾರ್ಕ್​ ನಗರಲ್ಲೇ ಹೆಚ್ಚು:

ಅಮೆರಿಕಾದ ಪ್ರಮುಖ ನಗರ ನ್ಯೂಯಾರ್ಕ್​. ಅಮೆರಿಕಾದಲ್ಲಿ ದಾಖಲಾಗಿರುವ ಒಟ್ಟು ಪ್ರಕರಣಗಳಲ್ಲಿ ಈ ನಗರದಲ್ಲೇ ಹೆಚ್ಚು ಸೋಂಕಿತರು ಇದ್ದಾರೆ. 44,745 ಸೋಂಕಿತರು ಈ ಒಂದೇ ನಗರದಲ್ಲಿದ್ದಾರೆ. ಅಂದರೆ 50 ಪ್ರತಿಶತದ ಆಸುಪಾಸು ಸೋಂಕಿತರು ಇಲ್ಲಿದ್ದಾರೆ. ಇಲ್ಲಿ ಈವರೆಗೆ 519 ಮಂದಿ ಸಾವನ್ನಪ್ಪಿದ್ದಾರೆ.

ಕೊರೊನಾ ಬಾಧಿತ ದೇಶಗಳಿಗೆ ಅಮೆರಿಕಾ ನೆರವು:.

ಈ ನಡುವೆ ಕೊರೊನಾ ಕಬಂಧಬಾಹು ಹಬ್ಬಿರುವ 64 ದೇಶಗಳಿಗೆ ಅಮೆರಿಕಾ 174 ಮಿಲಿಯನ್​ ಡಾಲರ್​ ಪ್ಯಾಕೇಜ್​ ಘೋಷಿಸಿದೆ. ಇದರಲ್ಲಿ ಭಾರತಕ್ಕೆ 2.9 ಮಿಲಿಯನ್​ ಡಾಲರ್​ ಘೋಷಿಸಿರುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್​ ಘೋಷಿಸಿದ್ದಾರೆ. ಇದು ಮನುಕುಲದ ಇತಿಹಾಸದಲ್ಲೇ ದೊಡ್ಡ ಮೊತ್ತದ ಪ್ಯಾಕೇಜ್​ ಆಗಿದ್ದು, ಈವರೆಗೆ ಯಾವೊಂದು ರಾಷ್ಟ್ರವು ಇಷ್ಟೊಂದು ಮೊತ್ತದ ನೆರವನ್ನು ನೀಡಿಲ್ಲ.​

ಭಾರಿ ಪ್ರಮಾಣದಲ್ಲಿ ಹತೋಟಿಗೆ ತಂದ ಚೀನಾ:

ವಿಶೇಷವೆಂದರೆ, ಕೊರೊನಾ ವೈರಸ್​ ಹುಟ್ಟಿಕೊಂಡಿದ್ದು ಚೀನಾದ ವುಹಾನ್​ ನಗರದಲ್ಲಿ. 11 ಮಿಲಿಯನ್​ ಜನಸಂಖ್ಯೆ ಹೊಂದಿರುವ ಇಲ್ಲಿನ ವುಹಾನ್​ ನಗರ ಕಳೆದ ಜನರವರಿ ತಿಂಗಳಿಂದಲೂ ಲಾಕ್​ಡೌನ್​ ಆಗಿತ್ತು. ದೇಶಾದ್ಯಂತ ಮುನ್ನೆಚ್ಚರಿಕೆ ಕೈಗೊಂಡು ಕೊರೊನಾ ವಿರುದ್ಧ ಕಮ್ಯುನಿಸ್ಟ್​ ರಾಷ್ಟ್ರ ಹೋರಾಡಿತು. ಇದರ ಪರಿಣಾಮವಾಗಿ ಚೀನಾದಲ್ಲಿ ಈಗ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ವುಹಾನ್​ ಪ್ರಾಂತ್ಯದಲ್ಲಿ ಕಳೆದ 15 ದಿನಗಳಲ್ಲಿ ಇಲ್ಲಿ ಪತ್ತೆಯಾಗಿರೋ ಸೋಂಕಿತರ ಸಂಖ್ಯೆ ಕೇವಲ 20 ಎಂದರೆ ನಂಬಲೇ ಬೇಕು. ಅಲ್ಲಿಯವರೆಗೂ ಇಲ್ಲಿನ ಜನರು ಕೊರೊನಾ ವಿರುದ್ಧ ಹೋರಾಡಿದ್ದಾರೆ. ಮುನ್ನೆಚ್ಚರಿಕೆ ವಹಿಸಿದ್ದಾರೆ.

ಸದ್ಯ ವುಹಾನ್​ ಕೊರೊನಾ ಲಾಕ್​ಡೌನ್​ನಿಂದ ತಹಬದಿಗೆ ಬರುತ್ತಿದ್ದು, ಜನ ಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಸಂಪೂರ್ಣ ಲಾಕ್​ಡೌನ್​ ಹೇರಿದ್ದ ಇಲ್ಲಿನ ಜನರು ನಿಧಾನವಾಗಿ ಹೊರ ಬರುತ್ತಿದ್ದಾರೆ. ಮುಂದಿನ ವಾರದಲ್ಲಿ ಇಲ್ಲಿನ ಮಾಲ್​ಗಳು ಹಾಗೂ ಇತರ ಶಾಪಿಂಗ್​ ಸೆಂಟರ್​ಗಳು ಬಾಗಿಲು ತೆರೆಯಲಿವೆ.

ದಕ್ಷಿಣ ಆಫ್ರಿಕಾದಲ್ಲಿ 2 ಸಾವು...

ದಕ್ಷಿಣ ಆಫ್ರಿಕಾದಲ್ಲಿ ಮೂರು ವಾರಗಳ ಲಾಕ್​ ಡೌನ್​ ಘೋಷಣೆ ಬೆನ್ನಲ್ಲೇ ದೇಶದಲ್ಲಿ ಇಬ್ಬರು ಕೊರೊನಾ ಸೋಂಕಿತರು ಸಾವನ್ನಪ್ಪಿರುವುದು ವರದಿಯಾಗಿದೆ. ಅಲ್ಲದೆ ದೇಶದಲ್ಲಿ ಸೋಂಕಿತರ ಸಂಖ್ಯೆ 1,170ಕ್ಕೂ ಹೆಚ್ಚಿದೆ.

ಲಾಕ್​ಡೌನ್​ನಿಂದ​ ಮಾಲಿನ್ಯ ಕಡಿಮೆ...

ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಲಾಕ್​ಡೌನ್​ ಘೋಷಣೆಯಾಗಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಪ್ರಮುಖ ನಗರಗಳ ವಾಯು ಗುಣಮಟ್ಟ ಸುಧಾರಿಸಿದ್ದು, ವಾಯು ಮಾಲಿನ್ಯ ಕಡಿಮೆಯಾಗಿದೆ.

ಬ್ರಿಟನ್​​ 6 ತಿಂಗಳು ಲಾಕ್​ಡೌನ್​...

ಬ್ರಿಟನ್​ನಲ್ಲೂ ಕೊರೊನಾ ವೈರಸ್​ ಅತಿಯಾಗಿ ವ್ಯಾಪಿಸಿದ್ದು, ಹೆಚ್ಚುವರಿಯಾಗಿ 6 ತಿಂಗಳು ಮನೆಯಲ್ಲೇ ಇರುವಂತೆ ಸರ್ಕಾರ ಹೇಳಿದೆ. ಹೀಗಾಗಿ ಯುಕೆಯಲ್ಲಿ 6 ತಿಂಗಳ ಲಾಕ್​ಡೌನ್​ ಇರಲಿದೆ.

ಅರಬ್​ ರಾಷ್ಟ್ರಗಳಲ್ಲಿ ಇರಾನ್​ ಮುಂದೆ...

ಅತ್ತ ಇರಾನ್​ನಲ್ಲಿ ಸಾವನ್ನಪ್ಪಿದವರ ಸಂಖ್ಯೆ 2,378ಕ್ಕೇರಿದ್ದು, 32,332ಜನರಿಗೆ ಸೋಮಕು ಹಬ್ಬಿದೆ. ಕೊಂಚ ನಿರಾಳವಾಗುವ ವಿಚಾರವೆಂದರೆ ಇಲ್ಲಿ 11,133ಜನ ವೈರಸ್​ನಿಂದ ಮುಕ್ತಿ ಹೊಂದಿದ್ದಾರೆ.

Last Updated : Mar 28, 2020, 9:32 AM IST

ABOUT THE AUTHOR

...view details