ಲಂಡನ್: ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಸತತ ನಾಲ್ಕು ವರ್ಷಗಳಿಂದ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಉದ್ಯಮಿ ವಿಜಯ್ ಮಲ್ಯ ಸಿಡಿಮಿಡಿಗೊಂಡಿದ್ದಾರೆ.
ಸುಮಾರು 9 ಸಾವಿರ ಕೋಟಿ ರೂಪಾಯಿ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರ ಆರೋಪ ಎದುರಿಸುತ್ತಿದ್ದಾರೆ. ಭಾರತಕ್ಕೆ ಹಸ್ತಾಂತರಿಸುವ ಕುರಿತು ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಮೂರನೇ ದಿನದ ವಿಚಾರಣೆಗೆ ಹಾಜರಾದ ಅವರು, ನನಗೆ ಸಾಲ ನೀಡಿರುವ ಬ್ಯಾಂಕ್ಗಳಲ್ಲಿ ಒಂದು ಮನವಿ ಮಾಡಿಕೊಳ್ತೇನಿ. ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮೂಲ ಸಾಲದ ಎಲ್ಲ ನೂರರಷ್ಟು ಹಣವನ್ನ ನಾನು ಪಾವತಿಸಲು ಸಿದ್ಧನಿದ್ದೇನೆ. ಆ ಹಣವನ್ನ ವಾಪಸ್ ತೆಗೆದುಕೊಳ್ಳಿ. ಅದಕ್ಕೆ ನಾನು ಸಿದ್ಧನಿದ್ದೇನೆ ಎಂದು ನ್ಯಾಯಾಲಯಕ್ಕೆ ಮಲ್ಯ ಹೇಳಿದ್ದಾರೆ.
ಕಿಂಗ್ ಫಿಶರ್ ಏರ್ ಲೈನ್ಸ್ನ ಮಾಜಿ ಮಾಲೀಕ ವಿಜಯ್ ಮಲ್ಯ ವಿರುದ್ಧ 2017ರ ಏಪ್ರಿಲ್ನಲ್ಲಿ ಭಾರತಕ್ಕೆ ಗಡಿಪಾರು ಮಾಡುವ ಕುರಿತು ಬಂಧನ ವಾರಂಟ್ ಜಾರಿಯಾಗಿತ್ತು. ಇದರ ವಿರುದ್ಧವಾಗಿ ಮಲ್ಯ ಕೋರ್ಟ್ನಲ್ಲಿ ಜಾಮೀನು ಸಹ ಪಡೆದಿದ್ದಾರೆ. ವಿಜಯ್ ಮಲ್ಯ ಕೋರ್ಟ್ಗೆ ಹೋಗುವಾಗ ಮಾಧ್ಯಮಗಳಿಂದ ತಪ್ಪಿಸಿಕೊಂಡು ಹೋದರು.