ವಾಷಿಂಗ್ಟನ್: ಅಮೆರಿಕದ ಚಿಕಾಗೊ ಪಬ್ಲಿಕ್ ಸ್ಕೂಲ್ಸ್ ಬೋರ್ಡ್ ಆಫ್ ಎಜುಕೇಶನ್ ಸಂಸ್ಥೆ ಅಚ್ಚರಿಯ ನಿರ್ಧಾರ ಕೈಗೊಂಡಿದೆ. 5 ಮತ್ತು ಅದಕ್ಕಿಂತ ಹೆಚ್ಚಿನ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲೇ ಕಾಂಡೋಮ್‌ಗಳನ್ನು ನೀಡುವ ವಿಚಾರ ಹುಬ್ಬೇರಿಸುವಂತಿದೆ. ಈ ಶೈಕ್ಷಣಿಕ ವರ್ಷದಿಂದಲೇ ಸಂಸ್ಥೆಯ ಅಧೀನದಲ್ಲಿರುವ 600 ಶಾಲೆಗಳಿಗೆ ಈ ನಿಯಮ ಅನ್ವಯಿಸುತ್ತದೆ.
ಲೈಂಗಿಕ ಶಿಕ್ಷಣದ ಉದ್ದೇಶ
2020ರ ಡಿಸೆಂಬರ್‌ನಲ್ಲೇ ಸಿಪಿಎಸ್ ಮಂಡಳಿ ಲೈಂಗಿಕ ಶಿಕ್ಷಣ ವಿಧಾನದ ಪಠ್ಯ ರೂಪಿಸಿದೆ. ಹೀಗಾಗಿ ಅಲ್ಲಿನ ಪ್ರಾಥಮಿಕ ಶಾಲೆಗಳಲ್ಲಿ 250, ಪ್ರೌಢ ಶಾಲೆಗಳಲ್ಲಿ 1,000 ವರೆಗೆ ಕಾಂಡೋಮ್‌ಗಳು ಲಭ್ಯವಿರುತ್ತವೆ. ಚಿಕಾಗೊ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಕಾಂಡೋಮ್‌ಗಳನ್ನು ಸರಬರಾಜು ಮಾಡಲಾಗುತ್ತದೆ. ಕಾಂಡೋಮ್‌ಗಳು ಖಾಲಿಯಾದರೆ, ಪ್ರಾಂಶುಪಾಲರು ಆರೋಗ್ಯ ಇಲಾಖೆಗೆ ತಿಳಿಸಬಹುದು ಮತ್ತು ಪುನಃ ಪಡೆಯಬಹುದಾಗಿದೆ.
ಆರೋಗ್ಯ ಸಂಬಂಧ ಸರಿಯಾದ ನಿರ್ಧಾರವನ್ನು ಕೈಗೊಳ್ಳುವ ಹಕ್ಕು ಯುವಕರಿಗೆ ಇದೆ. ನಿರ್ಧಾರಗಳಿಗೆ ಹೊಂದಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಲು ಅವರಿಗೆ ಸಾಕಷ್ಟು ಸಂಪನ್ಮೂಲಗಳು ಬೇಕಾಗುತ್ತವೆ. ನಾವು ಅವುಗಳನ್ನು ನೀಡುತ್ತೇವೆ. ನಮಗೆ ಕಾಂಡೋಮ್‌ಗಳು ಬೇಕಾದಾಗ ಅವು ಲಭ್ಯ ಇದೆಯೇ ಎಂದು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ. ಇವು ಲಭ್ಯವಿಲ್ಲದಿದ್ದರೆ ಗಂಭೀರ ಪರಿಣಾಮಗಳು ಉಂಟಾಗಬಹುದು. ಲೈಂಗಿಕವಾಗಿ ಹರಡುವ ರೋಗಗಳು, ಅನಗತ್ಯ ಗರ್ಭಧಾರಣೆ ತಡೆಯಲು ಈ ಕ್ರಮಗಳು ಸಹಕಾರಿಯಾಗಿವೆ. ಇದಕ್ಕೆ ಸ್ವಲ್ಪ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಆದ್ರೆ ಸಮಾಜ ಬದಲಾಗಿದೆ ಎಂದು ನಾನು ನಂಬುತ್ತೇನೆ ಎಂದು ಸಿಪಿಎಸ್ ವೈದ್ಯರಾದ ಕೊನ್ನೆತ್ ಫಾಕ್ಸ್ ತಿಳಿಸಿದ್ದಾರೆ.