ಪ್ಯಾರೀಸ್(ಫ್ರಾನ್ಸ್):ಕೋವಿಡ್ ಲಸಿಕೆ ಕೊರತೆ ಎಲ್ಲೆಡೆ ಕಾಡುತ್ತಿದೆ. ಕೊರೊನಾದಿಂದ ರಕ್ಷಣೆಗಾಗಿ ಎಲ್ಲರೂ ವ್ಯಾಕ್ಸಿನೇಷನ್ನತ್ತ ಒಲವು ತೋರುತ್ತಿದ್ದಾರೆ. ಫ್ರಾನ್ಸ್ನಲ್ಲಿ ಸೋಮವಾರ ಒಂದೇ ದಿನ ಸುಮಾರು 9 ಲಕ್ಷ ಮಂದಿ ಕೋವಿಡ್ ವ್ಯಾಕ್ಸಿನ್ಗಾಗಿ ನೋಂದಾಯಿಸಿಕೊಂಡಿದ್ದಾರೆ.
ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಇಲ್ಲದಿದ್ದರೆ ಅಥವಾ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡ ಪ್ರಮಾಣ ಪತ್ರವಿಲ್ಲದಿದ್ದರೆ, ಅಂತಹ ವ್ಯಕ್ತಿಗಳಿಗೆ ನಿರ್ಬಂಧ ವಿಧಿಸುವುದಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಎಚ್ಚರಿಕೆ ನೀಡಿದ ಬಳಿಕ ಲಕ್ಷಾಂತರ ಜನರು ಕೋವಿಡ್ ವ್ಯಾಕ್ಸಿನೇಷನ್ಗೆ ನೋಂದಾಯಿಸಿಕೊಂಡಿದ್ದಾರೆ.
ಅದರಲ್ಲೂ ಆರೋಗ್ಯ ಸಿಬ್ಬಂದಿ ಸೆಪ್ಟೆಂಬರ್ 15ರೊಳಗೆ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಬೇಕು. ಇಲ್ಲವಾದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಫ್ರಾನ್ಸ್ನಲ್ಲಿ ಕೋವಿಡ್ ಲಸಿಕೆಗೆ ನೋಂದಣಿ ಮಾಡಿಕೊಳ್ಳಲು ಇರುವ ಡಾಕ್ಟೋಲಿಬ್ ಎಂಬ ವೆಬ್ಸೈಟ್ನ ಮುಖ್ಯಸ್ಥರಾದ ಸ್ಟಾನಿಸ್ಲಾಸ್ ನಿಯೋಕ್ಸ್- ಚೆತಾಯು ದಾಖಲೆ ಪ್ರಮಾಣದಲ್ಲಿ ಕೋವಿಡ್ ವ್ಯಾಕ್ಸಿನೇಷನ್ಗೆ ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ಆರ್ಎಂಸಿ ರೇಡಿಯೋಗೆ ಮಾಹಿತಿ ನೀಡಿದ್ದಾರೆ.
ಮೇ 11ರಂದು ಲಸಿಕೆಗಾಗಿ ನೋಂದಣಿ ಮಾಡಿಕೊಂಡಿದ್ದೇ, ದಾಖಲೆಯಾಗಿತ್ತು. ಆದರೆ ಈಗ 9 ಲಕ್ಷ ಮಂದಿ ನೋಂದಣಿ ಮಾಡಿಕೊಂಡು ಆ ದಾಖಲೆಯನ್ನು ಮುರಿದಿದ್ದಾರೆ ಎಂದು ನಿಯೋಕ್ಸ್ ಚೆತಾಯು ಸ್ಪಷ್ಟನೆ ನೀಡಿದ್ದಾರೆ.