ವಾಷಿಂಗ್ಟನ್:ಟ್ಯಾಂಪಾ ಬೇ ಪ್ರದೇಶದಲ್ಲಿ ಎಂಟು ಯುವತಿಯರ ಮೇಲೆ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿದ ಆರೋಪಿಯನ್ನು 35 ವರ್ಷಗಳ ಬಳಿಕ ನೇಣುಗಂಬಕ್ಕೆ ಹಾಕಲಾಗಿದೆ.
ರಾಬರ್ಟ್ ಬಾಬಿ ಲಾಂಗ್ (65) ಅಮೆರಿಕಾದ ಫ್ಲೋರಿಡಾ ರಾಜ್ಯದಲ್ಲಿ ನೇಣುಗಂಬಕ್ಕೆ ಏರಿದ ಅಪರಾಧಿ. 'ಬಾಬಿಯ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಿದ್ದು,ನ್ಯಾಯಾಧೀಶರ ಆದೇಶ ಅನುಸಾರ ಮರಣದಂಡನೆ ವಿಧಿಸಲಾಯಿತು' ಎಂದು ಇಲ್ಲಿನ ಸುಧಾರಣ ಇಲಾಖೆಯ ನಿರ್ದೇಶಕ ಮಿಚೆಲ್ ಗ್ಲಾಡಿ ತಿಳಿಸಿದ್ದಾರೆ.
'ಕ್ಲಾಸಿಫೈಡ್ ಆ್ಯಡ್ ರೇಪಿಸ್ಟ್' ಎಂದೇ ಕುಖ್ಯಾತಿಯಾಗಿದ್ದ ಲಾಂಗ್, 1985ರ ಸೆಪ್ಟೆಂಬರ್ನಲ್ಲಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧ ಬಂಧನಕ್ಕೊಳಗಾಗಿದ್ದ.ಈತನನ್ನು ತನಿಖೆಗೆ ಒಳಪಡಿಸಿದಾಗ 8 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಗ್ಲಾಡಿ ಹೇಳಿದ್ದಾರೆ.
ಸ್ಥಳೀಯ ಪತ್ರಿಕೆ ಕ್ಲಾಸ್ಫೈಡ್ಸ್ ಆ್ಯಡ್‌ನಲ್ಲಿ ಪ್ರಕಟವಾಗುತ್ತಿದ್ದ ಗೃಹೋಪಯೋಗಿ ವಸ್ತುಗಳು ಮಾರಾಟಕ್ಕಿವೆ ಎಂಬ ಜಾಹೀರಾತು ನೋಡಿ ಈತ ಸಂತ್ರಸ್ತರನ್ನು ಗುರಿಯಾಗಿಸಿಕೊಳ್ಳುತ್ತಿದ್ದ.ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಜಾಹೀರಾತುದಾರರ ಮನೆ ಹೊಕ್ಕು, ಇಲ್ಲವೇ ಅಪಹರಿಸಿ ಬಳಿಕ ಅತ್ಯಾಚಾರ ಎಸಗಿ ಕೊಲೆ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ತಿಳಿದು ಬಂದಿತ್ತು. ಆಪಾದಿತನ ಕೃತ್ಯಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು,ಕೋರ್ಟ್ ಮರಣದಂಡನೆ ಶಿಕ್ಷೆಗೆ ಆದೇಶಿಸಿತ್ತು ಎಂದು ನಿರ್ದೇಶಕ ಮಾಹಿತಿ ನೀಡಿದ್ದಾರೆ.