ನ್ಯೂಯಾರ್ಕ್:ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಭಾರತ ಹಾಗೂ ಜಮ್ಮು ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಭಾಷಣಕ್ಕೆ ಭಾರತ ತಿರುಗೇಟು ನೀಡಿದೆ.
ಪರಮಾಣು ಅಸ್ತ್ರ ಹೊಂದಿರುವ ಭಾರತ-ಪಾಕಿಸ್ತಾನಗಳ ನಡುವೆ ಒಂದು ವೇಳೆ ಯುದ್ಧ ನಡೆದರೆ, ವಿಶ್ವದ ಸರ್ವನಾಶ ಖಚಿತ. ನಾವು ಸೋಲು ಕಾಣಬಹುದು, ಆದರೆ ಕೊನೆಯುಸಿರು ಇರುವವರೆಗೂ ಹೋರಾಟ ನಡೆಸುತ್ತೇವೆ ಎಂದು ಇಮ್ರಾನ್ ಖಾನ್ ಹೇಳಿರುವುದು ಸರಿಯೇ? ಓರ್ವ ಜವಾಬ್ದಾರಿಯುತ ರಾಜಕಾರಣಿ ಹೀಗೆ ಮಾತನಾಡುವುದು ಎಷ್ಟು ಸಮಂಜಸ ಎಂದು ವಿಶ್ವ ಸಂಸ್ಥೆಯಲ್ಲಿ ಭಾರತದ ಮೊದಲ ಕಾರ್ಯದರ್ಶಿ ವಿದಿಶಾ ಮೈತ್ರಾ ಪ್ರಶ್ನಿಸಿದ್ದಾರೆ.
ವಿಶ್ವಸಂಸ್ಥೆಯಿಂದ ನಿರ್ಬಂಧಿಸಲಾಗಿದ್ದ ಅಲ್ ಖೈದಾ ಮತ್ತು ಇಸಿಸ್ ಉಗ್ರ ಸಂಘಟನೆಗಳ ಮುಖಂಡರಿಗೆ ಪಿಂಚಣಿ ನೀಡುವ ವಿಶ್ವದ ಏಕೈಕ ಸರ್ಕಾರ ತಮ್ಮದು ಎಂದು ಪಾಕಿಸ್ತಾನ ಒಪ್ಪಿಕೊಳ್ಳುತ್ತದೆಯೇ? ಎಂದು ವಿದಿಶಾ ಪ್ರಶ್ನಿಸಿದ್ದಾರೆ.
ಪಾಕಿಸ್ತಾನದಲ್ಲಿ ಯಾವುದೇ ಉಗ್ರ ಸಂಘಟನೆಗಳಿಲ್ಲ ಎನ್ನುವ ಇಮ್ರಾನ್ ಖಾನ್, ವಿಶ್ವಸಂಸ್ಥೆಯಿಂದ ಪರಿಶೀಲನೆಗೆ ಆಹ್ವಾನ ನೀಡುತ್ತಾರೆ. ಆದರೆ ವಿಶ್ವಸಂಸ್ಥೆ ಗೊತ್ತುಪಡಿಸಿದ ಘೋಷಿತ ಜಾಗತಿಕ 130 ಉಗ್ರರು ಮತ್ತು ವಿಶ್ವಸಂಸ್ಥೆ ಪಟ್ಟಿ ಮಾಡಿದ 25 ಘೋಷಿತ ಭಯೋತ್ಪಾದಕ ಘಟಕಗಳ ನೆಲೆ ಪಾಕಿಸ್ತಾನವೇ ಆಗಿದೆ ಎಂದು ಪಾಕಿಸ್ತಾನ ಪ್ರಧಾನಿ ಖಚಿತಪಡಿಸಬಹುದೇ? ಎಂದು ಪ್ರಶ್ನೆ ಮಾಡಿದ್ದಾರೆ.
ಇತಿಹಾಸದ ಬಗ್ಗೆ ನಿಮಗೆ ಸೂಕ್ಷ್ಮವಾದ ತಿಳುವಳಿಕೆ ಇರಲಿ. 1971ರಲ್ಲಿ ಪಾಕಿಸ್ತಾನ ಸೇನೆ ಬಾಂಗ್ಲಾ ವಿಮೋಚನೆ ವೇಳೆ ನಡೆಸಿದ ಭೀಕರ ನರಮೇಧವನ್ನು ಮರೆಯಬೇಡಿ ಎಂದು ವಿದಿಶಾ ಕಿಡಿಕಾರಿದ್ದಾರೆ.