ವಾಷಿಂಗ್ಟನ್: 'ಫೈಝರ್' ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಅಮೆರಿಕದ ಎಫ್ಡಿಎ (ಫುಡ್ & ಡ್ರಗ್ ಅಡ್ಮಿನಿಸ್ಟ್ರೇಷನ್) ಅನುಮೋದನೆ ನೀಡಿದೆ.
ಫೈಝರ್ ಹಾಗೂ ಬಯೋಎನ್ಟೆಕ್ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಯ ತುರ್ತು ಬಳಕೆ ಕುರಿತು ಎಫ್ಡಿಎನ ಲಸಿಕೆ ಸಲಹಾ ಸಮಿತಿಯು ಸಭೆ ನಡೆಸಿತ್ತು. ಸಭೆಯಲ್ಲಿ 17 ಮಂದಿ ತುರ್ತು ಬಳಕೆ ಪರವಾಗಿ ಮತಚಲಾಯಿಸಿದರೆ, ನಾಲ್ವರು ಇದರ ವಿರುದ್ಧವಾಗಿ ವೋಟ್ ಮಾಡಿದ್ದಾರೆ. ಒಬ್ಬರು ಮಾತ್ರ ಗೈರಾಗಿದ್ದರು.
ತುರ್ತು ಬಳಕೆ ಪರ ಬಹುಮತವಿದ್ದ ಕಾರಣ ಫೈಝರ್ ಮನವಿಗೆ ಎಫ್ಡಿಎ ಅಸ್ತು ಎಂದಿದೆ. 16 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಮಾತ್ರ ತುರ್ತು ಪರಿಸ್ಥಿತಿಯಿದ್ದಲ್ಲಿ ಲಸಿಕೆ ಬಳಸುವಂತೆ ಸಮಿತಿಯು ಸಲಹೆ ನೀಡಿದೆ.
ಓದಿ:ಕ್ಲಿನಿಕಲ್ ಪ್ರಯೋಗಗಳಿಗೆ ಅನುಮತಿ ಪಡೆದ ದೇಶದ ಮೊದಲ ಆರ್‌ಎನ್‌ಎ ಕೋವಿಡ್ ಲಸಿಕೆ
ಈಗಾಗಲೇ ಇಂಗ್ಲೆಂಡ್, ಕೆನಡಾ, ಬಹ್ರೇನ್ ಮತ್ತು ಸೌದಿ ಅರೇಬಿಯಾದಲ್ಲಿ ಫೈಝರ್ ಲಸಿಕೆ ಬಳಕೆಗೆ ಅನುಮತಿ ದೊರೆತಿದೆ. ಅಮೆರಿಕದಲ್ಲಿ ಬುಧವಾರ ಒಂದೇ ದಿನದಲ್ಲಿ 3,000ಕ್ಕೂ ಹೆಚ್ಚು ಕೊರೊನಾ ಸೋಂಕಿತರು ಬಲಿಯಾಗಿದ್ದರು. ಹೀಗಾಗಿ ಅಮೆರಿಕದಲ್ಲಿ ಲಸಿಕೆಯ ತುರ್ತು ಬಳಕೆ ಅನಿವಾರ್ಯವಾಗಿವೆ. ದೇಶದ ಜನಸಂಖ್ಯೆಯ ಶೇ.70 ರಷ್ಟು ಮಂದಿಗೆ ಲಸಿಕೆ ಹಾಕಿಸುವ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.