ವಾಷಿಂಗ್ಟನ್:ಭಾರತದಲ್ಲಿ ಪ್ರಸ್ತುತ ಕೋವಿಡ್ -19 ಬಿಕ್ಕಟ್ಟು ಎದುರಿಸಲು ಜನರಿಗೆ ಲಸಿಕೆ ನೀಡುವುದೇ ಏಕೈಕ ದೀರ್ಘಕಾಲೀನ ಪರಿಹಾರವಾಗಿದೆ ಎಂದು ಅಮೆರಿಕದ ಹಿರಿಯ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಆಂಥೋನಿ ಫೌಸಿ ಅಭಿಪ್ರಾಯಪಟ್ಟಿದ್ದಾರೆ.
ಯುಎಸ್ ಅಧ್ಯಕ್ಷ ಜೋ ಬೈಡನ್ ಅವರ ಮುಖ್ಯ ವೈದ್ಯಕೀಯ ಸಲಹೆಗಾರರೂ ಆಗಿರುವ ಆಂಥೋನಿ ಫೌಸಿ, ಭಾರತವು ಲಸಿಕೆ ಉತ್ಪಾದಿಸುವ ವಿಶ್ವದ ಅತಿದೊಡ್ಡ ದೇಶವಾಗಿದೆ. ಲಸಿಕೆ ಉತ್ಪಾದನೆ ಹೆಚ್ಚಿಸಲು ದೇಶೀಯವಾಗಿ ಮಾತ್ರವಲ್ಲದೇ ಜಾಗತಿಕವಾಗಿಯೂ ಸಂಪನ್ಮೂಲಗಳನ್ನು ಪಡೆಯಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 3.66 ಲಕ್ಷ ಕೋವಿಡ್ ಕೇಸ್, 3,754 ಸಾವು ವರದಿ
ಕಳೆದ ವರ್ಷ ಚೀನಾ ಮಾಡಿದಂತೆ ಭಾರತವು ತಾತ್ಕಾಲಿಕ ಕ್ಷೇತ್ರ ಆಸ್ಪತ್ರೆಗಳನ್ನು ತಕ್ಷಣ ನಿರ್ಮಿಸುವ ಅಗತ್ಯವಿದೆ. ಲಸಿಕೆ ನೀಡುವುದರೊಂದಿಗೆ ದೇಶಾದ್ಯಂತ ಲಾಕ್ಡೌನ್ ಮಾಡುವ ಅಗತ್ಯವನ್ನು ಫೌಸಿ ಒತ್ತಿ ಹೇಳಿದ್ದಾರೆ.
ಆಮ್ಲಜನಕವಿಲ್ಲದೇ ಜನರು ಸಾಯುತ್ತಿರುವುದು ನಿಜಕ್ಕೂ ದುರಂತದ ಸಂಗತಿ. ಆಸ್ಪತ್ರೆಗಳಲ್ಲಿ ಬೆಡ್ ಇಲ್ಲವೆಂದು ರೋಗಿಗಳನ್ನು ರಸ್ತೆಯಲ್ಲಿ ನಿಲ್ಲಿಸಲು ಆಗುವುದಿಲ್ಲ. ಅಷ್ಟಕ್ಕೂ ಅಲ್ಲಿ ಏನು ನಡೆಯುತ್ತಿದೆ ಎಂದು ಆಂಥೋನಿ ಫೌಸಿ ಭಾರತದ ಕೋವಿಡ್ ಪರಿಸ್ಥಿತಿಗೆ ಬೇಸರ ವ್ಯಕ್ತಪಡಿಸಿದ್ದಾರೆ.