ನವದೆಹಲಿ:ಕೊರೊನಾ ದಿನಕ್ಕೊಂದು ಬಣ್ಣ ಬದಲಾಯಿಸುವಂತಿದೆ. ಇತ್ತೀಚೆಗಷ್ಟೇ ಒಮಿಕ್ರಾನ್ ಕಾಣಿಸಿಕೊಂಡು, ಜಗತ್ತಿನಾದ್ಯಂತ ಭೀತಿ ಸೃಷ್ಟಿಸುತ್ತಿದೆ. ಈ ಮಧ್ಯೆ ಡೆಲ್ಟಾ ಮತ್ತು ಒಮಿಕ್ರಾನ್ ಮಿಶ್ರಣವಾದ ಡೆಲ್ಮಿಕ್ರಾನ್ ಯೂರೋಪ್ ಮತ್ತು ಅಮೆರಿಕದ ಹಲವು ಭಾಗಗಳಲ್ಲಿ ಪತ್ತೆಯಾಗಿದ್ದು, ಕೆಲವೇ ದಿನಗಳ ಹಿಂದೆ ಐಹೆಚ್ಯು ಎಂಬ ಹೊಸ ಕೊರೊನಾ ವೇರಿಯಂಟ್ ಅನ್ನು ಫ್ರಾನ್ಸ್ ತಜ್ಞರು ಪತ್ತೆ ಹಚ್ಚಿದ್ದಾರೆ.
ಐಹೆಚ್ಯು ಎಂದರೆ ಯುನಿವರ್ಸಿಟಿ ಹಾಸ್ಪಿಟಲ್ ಇನ್ಸ್ಟಿಟ್ಯೂಟ್ (IHU-University Hospital Institutes)ಎಂದರ್ಥ. ಫ್ರಾನ್ಸ್ನ ಯುನಿವರ್ಸಿಟಿ ಹಾಸ್ಪಿಟಲ್ ಇನ್ಸ್ಟಿಟ್ಯೂಟ್ಸ್ನ ತಜ್ಞರು ಈ ರೂಪಾಂತರಿಯನ್ನು ಪತ್ತೆ ಹಚ್ಚಿದ ಕಾರಣದಿಂದ ತಾತ್ಕಾಲಿಕವಾಗಿ ಈ ವೈರಸ್ಗೆ ಐಹೆಚ್ಯು ಎಂದು ಹೆಸರಿಟ್ಟಿದ್ದಾರೆ.
ಯುನಿವರ್ಸಿಟಿ ಹಾಸ್ಪಿಟಲ್ ಇನ್ಸ್ಟಿಟ್ಯೂಟ್ಸ್ ಅಡಿ ಬರುವ ಮರ್ಸಿಲ್ಲಿಯಲ್ಲಿರುವ ಮೆಡಿಟರೇನಿ ಇನ್ಫೆಕ್ಷನ್ ಸಂಸ್ಥೆಯ ಸಂಶೋಧಕರು ಈ ವೈರಸ್ ಅನ್ನು ಕಂಡು ಹಿಡಿದಿದ್ದಾರೆ. ಈ ಹೊಸ ರೂಪಾಂತರಿ ವೈರಸ್ ಅನ್ನು B.1.640.2 ಎಂದು ವರ್ಗೀಕರಣ ಮಾಡಲಾಗಿದೆ.
ಆಗ್ನೇಯ ಫ್ರಾನ್ಸ್‌ನಲ್ಲಿ ಒಂದೇ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ಸುಮಾರು 12 ಮಂದಿ ಕೊರೊನಾ ಸೋಂಕಿತರಲ್ಲಿನ ವೈರಸ್ ಅನ್ನು ಪರೀಕ್ಷೆಗೆ ಒಳಪಡಿಸಿದಾಗ ಆ ವೈರಸ್ ವಿಭಿನ್ನ ಸಂರಚನೆಯನ್ನು ತೋರಿಸಿತ್ತು ಎಂದು ಮೆಡಿಟರೇನಿ ಇನ್ಫೆಕ್ಷನ್ ಸಂಸ್ಥೆಯ ತಜ್ಞ ಫಿಲಿಪ್ ಕೋಲ್ಸನ್ ಸ್ಪಷ್ಟನೆ ನೀಡಿದ್ದಾರೆ.