ವಾಷಿಂಗ್ಟನ್ (ಯುಎಸ್) :ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಭಾರತಕ್ಕೆ ಭೇಟಿ ನೀಡಲು ನಾನು ಉತ್ಸುಕಳಾಗಿದ್ದೇನೆ ಎಂದು ಅಮೆರಿಕದ ಪ್ರಥಮ ಮಹಿಳೆ ಹಾಗೂ ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯ ಟ್ರಂಪ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೆಲಾನಿಯ ಟ್ರಂಪ್, ಭಾರತಕ್ಕೆ ಭೇಟಿ ನೀಡುತ್ತಿರುವುದು ತಮನ್ನು ಉಲ್ಲಸಿತಗೊಳಿಸಿದೆ. ಉಭಯ ದೇಶಗಳ ನಡುವಿನ ನಿಕಟ ಸಂಬಂಧವನ್ನು ಅರಿಯಲು ಯುಎಸ್ ಪ್ರಥಮ ಮಹಿಳೆಯಾಗಿ ನನಗೆ ಇದೊಂದು ಉತ್ತಮ ಅವಕಾಶ. ಈ ರೀತಿ ಆಹ್ವಾನ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು ಎಂದು ಟ್ವೀಟ್ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ಯುಎಸ್ ಪ್ರಧಾನಿ ಮತ್ತು ಪ್ರಥಮ ಮಹಿಳೆ ಭಾರತಕ್ಕೆ ಭೇಟಿ ನೀಡುತ್ತಿರುವುದು ಬಹಳ ವಿಶೇಷವಾದದ್ದು. ಭಾರತ ಅಥಿತಿಗಳಿಗೆ ಅವಿಸ್ಮರಣೀಯ ಸ್ವಾಗತ ನೀಡಲಿದೆ. ಈ ಭೇಟಿ ಬಹಳ ವಿಶೇಷವಾದದ್ದು ಮತ್ತು ಭಾರತ-ಯುಎಸ್ ನಡುವಿನ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಪ್ರಮುಖವಾಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಮೆಲಾನಿಯ ಟ್ರಂಪ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಭಾರತಕ್ಕೆ ಭೇಟಿ ನೀಡಲು ನಾನು ಉತ್ಸುಕಳಾಗಿದ್ದೇನೆ. ಉಭಯ ದೇಶಗಳ ನಡುವಿನ ನಿಕಟ ಸಂಬಂಧವನ್ನು ಮತ್ತಷ್ಟು ಬಲ ಪಡಿಸಲು ಇದೊಂದು ಉತ್ತಮ ಅವಕಾಶವಾಗಿದೆ ಎಂದಿದ್ದಾರೆ. ಫೆ. 24ರಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮೆಲಾನಿಯಾ ಟ್ರಂಪ್ ಭಾರತ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಅಹಮದಾಬಾದ್ ಮತ್ತು ದೆಹಲಿ ನಗರಗಳಿಗೆ ಭೇಟಿ ನೀಡಲಿದ್ದಾರೆ.