ವಾಷಿಂಗ್ಟನ್ (ಯುಎಸ್) :ಯುವಜನರು ಅತಿಯಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸುವುದರಿಂದ ಆರು ತಿಂಗಳೊಳಗೆ ಮಾನಸಿಕ ಖಿನ್ನತೆಗೆ ಒಳಗಾಗಬಹುದು ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ.
ಅರ್ಕಾನ್ಸಾಸ್ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಆರೋಗ್ಯ ವೃತ್ತಿಗಳ ಡೀನ್ ಹಾಗೂ ಪ್ರಾಧ್ಯಾಪಕ ಡಾ. ಬ್ರಿಯಾನ್ ಪ್ರಿಮಾಕ್ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬಯಲಾಗಿದೆ.
ಸಾಮಾಜಿಕಮಾಧ್ಯಮಗಳ ಬಳಕೆಯಿಂದ ಖಿನ್ನತೆ ಹೆಚ್ಚಳ :
ದಿನವೊಂದಕ್ಕೆ ಸಾಮಾಜಿಕ ಮಾಧ್ಯಮಗಳನ್ನು 120 ನಿಮಿಷಗಳಿಗಿಂತ ಕಡಿಮೆ ಬಳಸುವವರೊಂದಿಗೆ 300 ನಿಮಿಷಗಳಿಗಿಂತ ಹೆಚ್ಚು ಬಳಸುವವರನ್ನು ಹೋಲಿಸಿ ನೋಡಿದಾಗ, 300 ನಿಮಿಷಗಳಿಗಿಂತ ಹೆಚ್ಚು ಬಳಸುವವರು ಆರು ತಿಂಗಳೊಳಗೆ ಖಿನ್ನತೆಗೆ ಒಳಗಾಗುವುದು 2.8 ಪಟ್ಟು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.
ಡಿಸೆಂಬರ್ 10 ರಂದು ಆನ್‌ಲೈನ್‌ನಲ್ಲಿ ಪ್ರಕಟವಾಗಿರುವ ಈ ಅಧ್ಯಯನ ವರದಿ ಅಮೆರಿಕನ್ ಜರ್ನಲ್ ಆಫ್ ಪ್ರಿವೆಂಟಿವ್ ಮೆಡಿಸಿನ್‌ನ ಫೆಬ್ರವರಿ 2021 ರ ಸಂಚಿಕೆಯಲ್ಲಿ ಪ್ರಕಟಗೊಳ್ಳಲಿದೆ. ಇದು ಮುಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ಬಳಕೆ ಮತ್ತು ಖಿನ್ನತೆಯ ನಡುವಿನ ಸಂಬಂಧವನ್ನು ತೋರಿಸುವ ಮೊದಲ ದೊಡ್ಡ, ರಾಷ್ಟ್ರೀಯ ಅಧ್ಯಯನವಾಗಲಿದೆ.
ಓದಿ : ವಿಶ್ವದ ಅತ್ಯಂತ ವೇಗದ ಕಂಪ್ಯೂಟರ್ ಶೋಧಿಸಿದ ಚೀನಾ: ಸ್ಪೀಡ್ ಕೇಳಿದ್ರೆ ತಲೆ ತಿರುಗುತ್ತೆ!
ಸಾಮಾಜಿಕ ಮಾಧ್ಯಮ ಕ್ಷೇತ್ರದ ಹೆಚ್ಚಿನ ಕೆಲಸಗಳು ಇನ್ನೂ ಬಾಕಿಯಿದ್ದು, ಅದು ಕೋಳಿ ಮೊದಲಾ ಮೊಟ್ಟೆ ಮೊದಲಾ? ಎಂಬ ಪ್ರಶ್ನೆಯಂತಿದೆ ಎಂದು ಅಧ್ಯಯನಕಾರ ಪ್ರಿಮಾಕ್ ತಿಳಿಸಿದ್ದಾರೆ.
ಖಿನ್ನತೆ ಮತ್ತು ಸಾಮಾಜಿಕ ಮಾಧ್ಯಮ ಬಳಕೆಯು ಒಟ್ಟಿಗೆ ಹೋಗುತ್ತದೆ ಎಂದು ಇತರ ದೊಡ್ಡ ಅಧ್ಯಯನಗಳಿಂದ ನಮಗೆ ತಿಳಿದಿದೆ. ಆದರೆ ಯಾವುದು ಮೊದಲು ಬಂದಿತು ಎಂಬುವುದನ್ನು ಕಂಡುಹಿಡಿಯುವುದು ಕಷ್ಟ. ಈ ಹೊಸ ಅಧ್ಯಯನವು ಈ ಪ್ರಶ್ನೆಗಳ ಮೇಲೆ ಬೆಳಕು ಚೆಲ್ಲುತ್ತದೆ, ಏಕೆಂದರೆ ಹೆಚ್ಚಿನ ಆರಂಭಿಕ ಸಾಮಾಜಿಕ ಮಾಧ್ಯಮ ಬಳಕೆಯು ಖಿನ್ನತೆಯ ಪ್ರಮಾಣವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಆದರೂ, ಆರಂಭಿಕ ಖಿನ್ನತೆಯು ಸಾಮಾಜಿಕ ಮಾಧ್ಯಮ ಬಳಕೆಯಿಂದ ಬದಲಾವಣೆಯಾಗಲ್ಲ ಎಂದು ಪ್ರಿಮಾಕ್ ತಿಳಿಸಿದ್ದಾರೆ.