ಕ್ಯಾಲಿಫೋರ್ನಿಯಾ:ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಶಂಕಿತ ಆರೋಪಿ ಸೇರಿ ಒಟ್ಟು 9 ಮಂದಿ ಮೃತಪಟ್ಟಿದ್ದು, ಓರ್ವ ಗಾಯಗೊಂಡಿದ್ದಾನೆ.
ಇಲ್ಲಿನ ಸ್ಯಾನ್ ಜೋಸ್‌ನ ಕಣಿವೆ ಸಾರಿಗೆ ಪ್ರಾಧಿಕಾರದ (ವಿಟಿಎ) ಆವರಣದಲ್ಲಿ ಘಟನೆ ನಡೆದಿದೆ. ಸ್ಥಳದಲ್ಲಿ ಬಂದೂಕುಧಾರಿಯ ಮೃತದೇಹ ಪತ್ತೆಯಾಗಿದೆ. ಬಂದೂಕುಧಾರಿಯನ್ನು ಪೊಲೀಸರು 57 ವರ್ಷದ ವಿಟಿಎದ ನಿರ್ವಹಣಾ ಕಾರ್ಮಿಕ ಸ್ಯಾಮ್ಯುಯೆಲ್ ಕ್ಯಾಸಿಡಿ ಎಂದು ಗುರುತಿಸಿದ್ದಾರೆ. ಕೃತ್ಯದ ಹಿಂದಿನ ಈತನ ಉದ್ದೇಶ ತಿಳಿದು ಬಂದಿಲ್ಲ.
ಈ ಸುದ್ದಿಯನ್ನೂ ಓದಿ:ಛತ್ರಸಾಲ್ ಕೊಲೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ರ ನಾಲ್ವರು ಸಹಚರರ ಬಂಧನ
ಮೃತರ ಪೈಕಿ ಕೆಲವರು ವಿಟಿಎ ನೌಕರರಾಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣದ ತನಿಖೆಯನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ನಡೆಸುತ್ತಿದೆ.
"ಇಂದು ನಮ್ಮ ನಗರಕ್ಕೆ ಕರಾಳ ದಿನ ಮತ್ತು ಇದು ವಿಟಿಎಗೆ ದುರಂತದ ದಿನ" ಎಂದು ಸ್ಯಾನ್ ಜೋಸ್ ಮೇಯರ್ ಸ್ಯಾಮ್ ಲಿಕ್ಕಾರ್ಡೊ ಘಟನೆಯನ್ನು ಖಂಡಿಸಿ, ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ. ಮುಂದಿನ ಸೂಚನೆ ಬರುವವರೆಗೂ ವಿಟಿಎ ಲಘು ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.