ಕ್ಯೂಟೋ( ಈಕ್ವೆಡಾರ್):ಜೈಲಿನಲ್ಲಿ ಮಾರಾಮಾರಿ ನಡೆದು ಸುಮಾರು 24 ಮಂದಿ ಕೈದಿಗಳು ಸಾವನ್ನಪ್ಪಿರುವ ಘಟನೆ ಈಕ್ವೆಡಾರ್ನ ಕರಾವಳಿ ನಗರವಾದ ಗುವಯಾಕ್ವಿಲ್ನಲ್ಲಿ ನಡೆದಿದೆ ಎಂದು ಈಕ್ವೆಡಾರ್ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಸುಮಾರು 48 ಮಂದಿ ಗಾಯಗೊಂಡಿದ್ದು, ಸೇನೆ ಮತ್ತು ಭದ್ರತಾ ಪಡೆಗಳು ಸತತ ಐದು ಗಂಟೆಗಳ ಕಾರ್ಯಾಚರಣೆ ನಡೆಸಿ, ಕೊನೆಗೂ ಜೈಲನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯಶಸ್ವಿಯಾದವು.
ಲೋಬೋಸ್ ಮತ್ತು ಲಾಸ್ ಚೊನೆರೋಸ್ ಗ್ಯಾಂಗ್ಗಳ ನಡುವೆ ವಿವಾದದಿಂದಾಗಿ ಹಿಂಸಾಚಾರ ನಡೆದಿದ್ದು, ಹಿಂಸಾಚಾರದಲ್ಲಿ ಗನ್, ಚಾಕುಗಳು, ಸ್ಫೋಟಕಗಳನ್ನು ಬಳಸಲಾಗಿದೆ. ಇದರಿಂದಾಗಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗಯಸ್ ರಾಜ್ಯ ಗವರ್ನರ್ ಪ್ಯಾಬ್ಲೊ ಅರೋಸೆಮೆನಾ ಮಾಹಿತಿ ನೀಡಿದ್ದಾರೆ.
ಕೆಲವೊಂದು ಟಿವಿಗಳಲ್ಲಿ ಜೈಲಿನ ಕಿಟಕಿಯಿಂದ ಸ್ಫೋಟಕವನ್ನು ಎಸೆಯುತ್ತಿರುವುದು ಮತ್ತು ಗುಂಡು ಹಾರಿಸುತ್ತಿರುವ ದೃಶ್ಯಗಳನ್ನು ಪ್ರಸಾರ ಮಾಡಲಾಗಿದೆ. ಜೈಲಿನ ಅಡುಗೆ ಸಿಬ್ಬಂದಿಯನ್ನು ಹೊರಗೆ ಕರೆ ತಂದು ರಕ್ಷಣೆ ಮಾಡಲಾಗಿದೆ.
ಇದಕ್ಕೂ ಮೊದಲು ಜುಲೈನಲ್ಲಿ ಇದೇ ರೀತಿಯ ಮಾರಾಮಾರಿ ನಡೆದಿದ್ದು, ಸುಮಾರು ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಈ ವೇಳೆ, ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ಈಕ್ವೆಡಾರ್ನ ಜೈಲು ವ್ಯವಸ್ಥೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದರು.
ಫೆಬ್ರವರಿಯಲ್ಲಿ ದೇಶದ ಮೂರು ಕಾರಾಗೃಹಗಳಲ್ಲಿ ಏಕಕಾಲದಲ್ಲಿ ನಡೆದ ಗಲಭೆಯಲ್ಲಿ 79 ಕೈದಿಗಳು ಸಾವನ್ನಪ್ಪಿದ್ದರು. ಜುಲೈನಲ್ಲಿ ಲಿಟೋರಲ್ ಎಂಬಲ್ಲಿ 22 ಕೈದಿಗಳು ಪ್ರಾಣ ಕಳೆದುಕೊಂಡಿದ್ದರು. ಇದೇ ತಿಂಗಳಿನಲ್ಲಿ (ಸೆಪ್ಟೆಂಬರ್) ಜೈಲೊಂದರ ಮೇಲೆ ಡ್ರೋನ್ ದಾಳಿ ನಡೆದಿತ್ತಾದರೂ, ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.
ಇದನ್ನೂ ಓದಿ:ಕೋವಿಡ್ ಎಫೆಕ್ಟ್: ಅ.31ರ ವರೆಗೆ ಅಂತಾರಾಷ್ಟ್ರೀಯ ವಿಮಾನ ಸೇವೆ ನಿಷೇಧ ವಿಸ್ತರಣೆ