ನ್ಯೂಯಾರ್ಕ್ (ಅಮೆರಿಕ): ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಇಂದಿನಿಂದ ಐದು ದಿನಗಳ (ಮೇ. 24 ರಿಂದ 28) ಅಮೆರಿಕ ಪ್ರವಾಸ ಕೈಗೊಂಡಿದ್ದು, ನ್ಯೂಯಾರ್ಕ್ಗೆ ಬಂದಿಳಿದಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಕೋವಿಡ್ ನಿಯಂತ್ರಣಕ್ಕಾಗಿ ಅಮೆರಿಕದೊಂದಿಗೆ ಸಹಕಾರ ಪಡೆಯುವುದು ಮತ್ತು ಅಮೆರಿಕದ ಕಂಪನಿಗಳಿಂದ ಕೋವಿಡ್ ಲಸಿಕೆಗಳನ್ನು ಖರೀದಿಸುವುದು ಹಾಗೂ ಅವುಗಳ ಜಂಟಿ ಉತ್ಪಾದನೆಯ ಸಾಧ್ಯತೆಯನ್ನು ಅನ್ವೇಷಿಸುವ ಉದ್ದೇಶದಿಂದ ಸಚಿವರು ಅಮೆರಿಕಕ್ಕೆ ಬಂದಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ನ್ಯೂಯಾರ್ಕ್ಗೆ ಬಂದಿಳಿದ ಸಚಿವ ಜೈಶಂಕರ್ ಅವರನ್ನು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯಾಗಿರುವ ಟಿ.ಎಸ್.ತಿರುಮೂರ್ತಿ ಸ್ವಾಗತಿಸಿದರು. ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಬಳಿಕ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟೋನಿಯೊ ಗ್ಯುಟೆರಸ್ ಅವರನ್ನು ಸಚಿವ ಜೈಶಂಕರ್ ನ್ಯೂಯಾರ್ಕ್ನಲ್ಲಿ ಭೇಟಿಯಾಗಲಿದ್ದಾರೆ.
ಅಮೆರಿಕದ ಅಧ್ಯಕ್ಷ ಬೈಡನ್ ಆಡಳಿತದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡುವುದರ ಜೊತೆಗೆ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರೊಂದಿಗೆ ಕೋವಿಡ್ ಸಂಬಂಧಿತ ಹಾಗೂ ವಿದೇಶಾಂಗ ವ್ಯವಹಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಇದನ್ನೂ ಓದಿ:ಭಾರತಕ್ಕೆ 60 ಮಿಲಿಯನ್ ಕೋವಿಡ್ ಲಸಿಕೆ ನೀಡಿ: ಅಮೆರಿಕ ಅಧ್ಯಕ್ಷರಿಗೆ ಮನವಿ
ಕೊವಿಡ್ ವ್ಯಾಕ್ಸಿನ್ ಉತ್ಪಾದನೆಯಲ್ಲಿ ತೊಡಗಿರುವ ಅಮೆರಿಕಾದ ನಾನಾ ಉದ್ಯಮಗಳು ಮತ್ತು ಸಂಸ್ಥೆಗಳ ಜೊತೆ ಅವರು ಮಾತುಕತೆ ನಡೆಸಲಿದ್ದಾರೆ. ಉಭಯ ದೇಶಗಳ ನಡುವಿನ ಆರ್ಥಿಕ ಮತ್ತು ಕೋವಿಡ್ ಸಂಬಂಧಿತ ಸಹಕಾರದ ಕುರಿತು ವ್ಯಾಪಾರ ವಹಿವಾಟುಗಳನ್ನೊಳಗೊಂಡ ಪ್ರಮುಖ ವಿಚಾರಗಳ ಬಗ್ಗೆ ಇದೇ ವೇಳೆ ಸಂವಾದ ನಡೆಸಲಿದ್ದಾರೆ.
ಈಗಾಗಲೇ ತನ್ನ ಬಳಿ 80 ದಶಲಕ್ಷ ವ್ಯಾಕ್ಸಿನ್ ಹೆಚ್ಚುವರಿ ದಾಸ್ತಾನಿದೆ. ಕೊರೊನಾದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರಾಷ್ಟ್ರಗಳಿಗೆ ಸರಬರಾಜು ಮಾಡಲು ತಾನು ಸಿದ್ಧವಿರುವುದಾಗಿ ಅಮೆರಿಕ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಜೈಶಂಕರ್ ಅವರ ಭೇಟಿ ಅತ್ಯಂತ ಪ್ರಾಮುಖ್ಯತೆ ಪಡೆದಿದೆ.