ವಾಷಿಂಗ್ಟನ್: ಅಮೆರಿಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಲಸಿಕೆ ಅಭಿಯಾನ ಪರಿಣಾಮಕಾರಿಯಾದ ಬಳಿಕ ಕೋವಿಡ್ ಪ್ರಕರಣಗಳು ಇಳಿಕೆಯಾಗಿವೆ ಆದರೆ, ಡೆಲ್ಟಾ ವೈರಸ್ ಕುರಿತು ರಾಷ್ಟ್ರ ಎಚ್ಚರಿಕೆ ವಹಿಸಲಿದೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಕೋವಿಡ್ನಿಂದ ಮೃತಪಡುತ್ತಿರುವವರು ಹಾಗೂ ಆಸ್ಪತ್ರೆಗೆ ದಾಖಲಾಗುತ್ತಿರುವ ಬಹುತೇಕ ಮಂದಿ ಲಸಿಕೆ ಪಡೆಯದೇ ಇರುವವರಾಗಿದ್ದಾರೆ ಎನ್ನುವ ಮೂಲಕ ಜನರಿಗೆ ಲಸಿಕೆ ಪಡೆಯುವಂತೆ ಸೂಚಿಸಿದ್ದಾರೆ.
ಡಿಸೆಂಬರ್ ಆರಂಭದ ವೇಳೆ ಭಾರತದಲ್ಲಿ ಹುಟ್ಟಿಕೊಂಡ ಡೆಲ್ಟಾ ವೈರಸ್ ಅಥವಾ ಬಿ.1.617.2, ವಿಶ್ವದಾದ್ಯಂತ ವೇಗವಾಗಿ ಹರಡಿತು. ಅಲ್ಲದೇ ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಸೋಂಕಿತರಲ್ಲಿ ಶೇ.80ರಷ್ಟು ಮಂದಿಗೆ ಡೆಲ್ಟಾ ದೃಢಪಡುತ್ತಿದೆ. ಅದರಲ್ಲೂ ಹೆಚ್ಚಾಗಿ ಮಿಡ್ವೆಸ್ಟರ್ನ್ ರಾಜ್ಯಗಳಾದ ಮಿಸೌರಿ, ಕಾನ್ಸಾಸ್ ಮತ್ತು ಲೋವಾಗಳಲ್ಲಿ ಹೆಚ್ಚಾಗಿವೆ. ಇತ್ತೀಚೆಗೆ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ವರದಿಯ ಪ್ರಕಾರ ಅಮೆರಿಕದಲ್ಲಿ ಶೇ.51.7ರಷ್ಟು ಸೋಂಕಿತರಲ್ಲಿ ಡೆಲ್ಟಾ ವೈರಸ್ ಪತ್ತೆಯಾಗಿದೆ.