ನವದೆಹಲಿ:ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಸೇರಿ ದೇಶದ ವಿವಿಧ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ 'ನಿಷೇಧಿತ ವಲಸಿಗ' ಎಂದು ಡೊಮಿನಿಕಾ ಸರ್ಕಾರ ಘೋಷಿಸಿದೆ. ದ್ವೀಪ ರಾಷ್ಟ್ರದ ಈ ನಿರ್ಧಾರ ಚೋಕ್ಸಿಯನ್ನು ಸ್ವದೇಶಕ್ಕೆ ಕರೆತರಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವ ಭಾರತ ಸರ್ಕಾರಕ್ಕೆ ಶಕ್ತಿ ತುಂಬಿದಂತಾಗಿದೆ. ಡೊಮಿನಿಕಾದ ಪರಿಷ್ಕೃತ ಸೆಕ್ಷನ್ 5(1) (f) ವಲಸೆ ಮತ್ತು ಪಾಸ್‌ಪೋರ್ಟ್ ಕಾಯ್ದೆ-2017ರ ಅಡಿ ಮೆಹುಲ್ ಚೋಕ್ಸಿಯನ್ನು ನಿಷೇಧಿತ ವಲಸಿಗ ಎಂದು ಘೋಷಿಸಲಾಗಿದೆ.
Mehul Choksi: ಮೆಹುಲ್ ಚೋಕ್ಸಿ 'ನಿಷೇಧಿತ ವಲಸಿಗ'- ಡೊಮಿನಿಕಾ ಘೋಷಣೆ - ದ್ವೀಪ ರಾಷ್ಟ್ರ ಡೊಮಿನಿಕಾ
ಆ್ಯಂಟಿಗುವಾದಿಂದ ನಾಪತ್ತೆಯಾಗಿ ಡೊಮಿನಿಕಾ ದೇಶಕ್ಕೆ ಅತಿಕ್ರಮಣ ಪ್ರವೇಶ ಮಾಡಿದ್ದ ವಂಚಕ, ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು 'ನಿಷೇಧಿತ ವಲಸಿಗ' ಎಂದು ಡೊಮಿನಿಕಾ ಸರ್ಕಾರ ಘೋಷಿಸಿದೆ.
ಹೀಗಾಗಿ ಕಾಮಲ್‌ವೆಲ್ತ್ ರಾಷ್ಟ್ರ ಡೊಮಿನಿಕಾಗೆ ಪ್ರವೇಶಿಲು ಚೋಕ್ಸಿಗೆ ಅನುಮತಿ ಇಲ್ಲ. ಈ ಸಂಬಂಧ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವ ಆದೇಶಕ್ಕೆ ಡೊಮಿನಿಕಾ ಸರ್ಕಾರದ ಸಚಿವ ರೇಬಾರ್ನ್ ಬ್ಲ್ಯಾಕ್‌ಮೊರೆ ಸಹಿ ಮಾಡಿದ್ದಾರೆ. ಈ ಕುರಿತಾಗಿ ಮೆಹುಲ್ ಚೋಕ್ಸಿ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಮುನ್ನವೇ ಆತನ ಮನವಿಯನ್ನು ತಿರಸ್ಕರಿಸಿ, ಭಾರತಕ್ಕೆ ವಾಪಸ್ ಕಳುಹಿಸಬೇಕೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ಅಲ್ಲಿನ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಭಾರತದಲ್ಲಿ ಪಿಎನ್‌ಬಿ ಸೇರಿ ವಿವಿಧ ಬ್ಯಾಂಕ್‌ಗಳಿಗೆ 13,500 ಕೋಟಿ ವಂಚಿಸಿರುವ ಚೋಕ್ಸಿ ವಿದೇಶಕ್ಕೆ ಪರಾರಿಯಾಗಿದ್ದ. ಆ್ಯಂಟಿಗುವಾದ ಪೌರತ್ವ ಪಡೆದು 2018ರಿಂದ ಅಲ್ಲೇ ನೆಲೆಸಿ ಕಳೆದ ಮೇ 23 ರಂದು ನಾಪತ್ತೆಯಾಗಿದ್ದಾನೆ. ಬಳಿಕ ಡೊಮಿನಿಕಾ ದೇಶಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಅಲ್ಲಿನ ಕಾನೂನನ್ನು ಉಲ್ಲಂಘಿಸಿದ ಗಂಭೀರ ಆರೋಪ ಎದುರಿಸುತ್ತಿದ್ದಾನೆ.