ಕಾಬೂಲ್ (ಅಫ್ಘಾನಿಸ್ತಾನ): ಕಾಬೂಲ್ ಏರ್ಪೋರ್ಟ್ನಲ್ಲಿ ಆಗಸ್ಟ್ 29 ರಂದು ತಾವು ನಡೆಸಿದ ಡ್ರೋನ್ ದಾಳಿ ತಪ್ಪು ಎಂದು ಅಮೆರಿಕ ಮಿಲಿಟರಿ ಒಪ್ಪಿಕೊಂಡಿದೆ. ಅಲ್ಲದೆ, ಯಾವುದೇ ಮಿಲಿಟರಿ ಶಿಸ್ತಿನ ಕ್ರಮಕ್ಕೆ ಸಮರ್ಥನೆ ಇದೆಯೇ ಎಂದು ವಿಮರ್ಶಕರು ತಿಳಿಸಬೇಕು ಎಂದು ಅಮೆರಿಕ ಭದ್ರತಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಕೇಳಿದ್ದಾರೆ.
ಆಗಸ್ಟ್ 15 ರಂದು ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಆಗಸ್ಟ್ 30 ರೊಳಗೆ ಅಲ್ಲಿರುವ ಅಮೆರಿಕನ್ನರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಮುಗಿಸಬೇಕು ಎಂದು ಅಮೆರಿಕಗೆ ಎಚ್ಚರಿಕೆ ನೀಡಿದ್ದರು. ಆದರೆ, ಅಮೆರಿಕ ಕೊನೆ ಹಂತದ ಸ್ಥಳಾಂತರ ಪ್ರಕ್ರಿಯೆ ನಡೆಸುವಾಗ ಐಸಿಸ್-ಕೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. ಈ ದಾಳಿಗೆ ಪ್ರತಿದಾಳಿಯಾಗಿ ಅಮೆರಿಕ ಆಗಸ್ಟ್ 29ರಂದು ಡ್ರೋನ್ ದಾಳಿ ನಡೆಸಿತ್ತು. ಇದರಲ್ಲಿ ಮಕ್ಕಳೂ ಸೇರಿ 10 ನಾಗರಿಕರು ಮೃತಪಟ್ಟಿದ್ದರು.
ಆಗಸ್ಟ್ 29ರ ಡ್ರೋನ್ ದಾಳಿಯ ವರದಿ ನೀಡಿದ ಅಮೆರಿಕ ಉನ್ನತ ಕಮಾಂಡರ್ ಜನರಲ್ ಫ್ರಾಂಕ್ ಮೆಕೆಂಜಿ, ನಾವು ಅಂದು ನಡೆಸಿದ ದಾಳಿ ಒಂದು ದುರಂತ. ಅದು ನಮ್ಮಿಂದಾದ ತಪ್ಪು ಎಂದು ಹೇಳಿದ್ದಾರೆ. ಈ ಬಗ್ಗೆ ಅಮೆರಿಕ ಭದ್ರತಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಕೂಡ ಕ್ಷಮೆಯಾಚಿಸಿದ್ದಾರೆ. ಅಂದಿನ ದಾಳಿಯಲ್ಲಿ 10 ನಾಗರಿಕರು ಮೃತಪಟ್ಟಿದ್ದಾರೆ. ಈ ಸಾವಿನ ಬಗ್ಗೆ ತೀವ್ರ ಸಂತಾಪವಿದೆ ಎಂದಿದ್ದಾರೆ.