ವಾಷಿಂಗ್ಟನ್: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ಸೇನೆ ಅಥವಾ ಆರ್ಥಿಕವಾಗಿ ಸಹಾಯ ನೀಡಲು ಚೀನಾ ಯತ್ನಿಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ರಷ್ಯಾಕ್ಕೆ ಸಂಬಂಧಿಸಿದಂತೆ ಬೀಜಿಂಗ್ ತೆಗೆದುಕೊಳ್ಳುವ ನಿರ್ಧಾರಗಳನ್ನು ಜಗತ್ತು ನೋಡುತ್ತಿದೆ ಎಂದು ಅಮೆರಿಕ ಹೇಳಿದೆ.
ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಪ್ಸಾಕಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ರಷ್ಯಾಗೆ ಚೀನಾ ನೆರವಿನ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಜಗತ್ತು ಕೂಡ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ನಿರ್ಬಂಧಗಳನ್ನು ಉಲ್ಲಂಘಿಸಿದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ನಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರು ಈಗಾಗಲೇ ಸ್ಪಷ್ಟವಾಗಿ ಹೇಳಿರುವುದಾಗಿ ತಿಳಿಸಿದರು. ಚೀನಾ ತೆಗೆದುಕೊಳ್ಳುವ ನಿರ್ಧಾರಗಳನ್ನು ಜಗತ್ತು ವೀಕ್ಷಿಸಲಿದೆ. ಆದರೆ, ಯಾವುದೇ ಸಂಭಾವ್ಯ ಪರಿಣಾಮಗಳ ವಿಷಯದಲ್ಲಿ ನಾವು ಈ ಹಂತದಲ್ಲಿ ಖಾಸಗಿ ರಾಜತಾಂತ್ರಿಕರಿಗೆ ಅವುಗಳನ್ನು ಬಿಡುತ್ತೇವೆ ಎಂದು ಹೇಳಿದರು.