ವಾಷಿಂಗ್ಟನ್:ಸುಂಟರಗಾಳಿ ಅಬ್ಬರಕ್ಕೆ ಅಮೆರಿಕ ತತ್ತರಿಸಿದೆ. ಅರ್ಕಾನ್ಸಾಸ್, ಮಿಸಿಸಿಪ್ಪಿ, ಇಲಿನಾಯ್ಸ್, ಕೆಂಟುಕಿ, ಟೆನ್ನೆಸ್ಸಿ ಮತ್ತು ಮಿಸೌರಿ ಸೇರಿ 6 ರಾಜ್ಯಗಳ 30 ಕಡೆ ಶನಿವಾರ ವಿನಾಶಕಾರಿ ಸುಂಟರಗಾಳಿ ಎದ್ದಿದ್ದು, ಹಲವೆಡೆ ಅನಾಹುತ ಸಂಭವಿಸಿದೆ. ಸುಂಟರಗಾಳಿಗೆ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿರಬಹುದು ಎಂದು ವರದಿಯಾಗಿದೆ.
ಸುಂಟರಗಾಳಿ ಆರ್ಭಟಕ್ಕೆ ಕೆಂಟುಕಿಯಲ್ಲಿನ ಮೇಣದಬತ್ತಿ ಕಾರ್ಖಾನೆಯು ಸಂಪೂರ್ಣ ನಾಶವಾಗಿದೆ. ಸುಂಟರಗಾಳಿ ಅಪ್ಪಳಿಸಿದ ಸಮಯದಲ್ಲಿ ಮೇಣದಬತ್ತಿ ಕಾರ್ಖಾನೆಯಲ್ಲಿ ಸುಮಾರು 110 ಜನ ಕೆಲಸ ಮಾಡುತ್ತಿದ್ದರು. ಘಟನೆಯಿಂದ ಕೆಂಟುಕಿಯಲ್ಲಿ ಈಗಾಗಲೇ 50ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. ಸಾವಿನ ಸಂಖ್ಯೆಯು ನೂರರ ಗಡಿಯನ್ನು ಮೀರಬಹುದಾಗಿದೆ ಎಂದು ಕೆಂಟುಕಿ ಗವರ್ನರ್ ಆಂಡಿ ಬೆಶಿಯರ್ ಹೇಳಿದ್ದಾರೆ. ಈ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಅರ್ಕಾನ್ಸಾಸ್‌ನಲ್ಲಿ ಸುಂಟರಗಾಳಿಗೆ ನರ್ಸಿಂಗ್ ಹೋಮ್ ಹಾನಿಗೀಡಾಗಿದೆ. ಅಲ್ಲದೆ ಇಲಿನಾಯ್ಸ್‌ನಲ್ಲಿರುವ ಅಮೆಜಾನ್ ಗೋದಾಮಿನ ಮೇಲ್ಛಾವಣಿಯು ಹಾರಿಹೋಗಿದೆ. ಇಲ್ಲಿಯೂ ಕೂಡ ಕೆಲ ಸಾವು-ನೋವು ಸಂಭವಿಸಿದೆ. ಮತ್ತೊಂದು ನರ್ಸಿಂಗ್ ಹೋಮ್ ಹಾಗೂ ಟೆನ್ನೆಸ್ಸಿಯ ಟ್ರೂಮನ್‌ನಲ್ಲಿರುವ ಅಗ್ನಿಶಾಮಕ ಕೇಂದ್ರದಲ್ಲೂ ಗಣನೀಯ ಹಾನಿ ಉಂಟಾಗಿದೆ.