ಲೆಸ್‌ಕೇಯ್ಸ್: ಕೆರಿಬಿಯನ್ ಸಮುದ್ರತೀರದ ಪುಟ್ಟ ದೇಶ ಹೈಟಿಯಲ್ಲಿ ಕಳೆದ ಶನಿವಾರ ಸಂಭವಿಸಿದ ಪ್ರಬಲ ಭೂಕಂಪದಿಂದ ಸಾವಿನ ಸಂಖ್ಯೆ 1,941ಕ್ಕೆ ಏರಿಕೆಯಾಗಿದೆ. ನಿನ್ನೆಯ ದಿನ 500 ಮಂದಿಯ ಮೃತದೇಹ ದೊರೆತಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪವಾದ ಪ್ರದೇಶದಲ್ಲಿ ಬಿರುಗಾಳಿಸಹಿತಿ ಭಾರಿ ಮಳೆಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಪರಿಹಾರ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದ್ದು, ನಿರಾಶ್ರಿತರು ಆಕ್ರೋಶದ ಕಟ್ಟೆ ಒಡೆಯುತ್ತಿದೆ. ನೈರುತ್ಯ ಹೈಟಿ ಶೀತ ವಾತಾವರಣದಿಂದ ಪತರಗುಟ್ಟಿದ್ದು, ಸಾವಿರಾರು ಮಂದಿ ಬೀದಿಪಾಲಾಗಿದ್ದಾರೆ. ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.
ಇನ್ನು ಭೂಕಂಪದಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆಗೆ ಸಾವಿನ ಸಂಖ್ಯೆ 1,941ಕ್ಕೆ ಏರಿಕೆಯಾಗಿದೆ. 9,900 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸಿವಿಲ್ ಪ್ರೊಟೆಕ್ಷನ್ ಏಜೆನ್ಸಿ ಮಾಹಿತಿ ನೀಡಿದೆ. ಹಲವರು ವೈದ್ಯಕೀಯ ಸಹಾಯಕ್ಕಾಗಿ ಪರದಾಡುತ್ತಿರುವ ದೃಶ್ಯ ಮನಕಲಕುವಂತಿದೆ. ಅವಶೇಷಗಳಡಿ ಸಿಲುಕಿರುವ ಮೃತ ದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ಮುಂದುವರಿದೆ. ಮೂರು ಅಂತಸ್ತಿನ ಅಪಾರ್ಟ್ಮೆಂಟ್ ಕಟ್ಟಡ ತೂಗಾಡುತ್ತಿದ್ದ ದೃಶ್ಯ ಕಂಪನದ ತೀವ್ರತೆಯನ್ನು ಹೇಳುತ್ತಿತ್ತು.
ಪ್ರಕೃತಿ ವಿಕೋಪದಲ್ಲಿ 60,000ಕ್ಕೂ ಹೆಚ್ಚು ಮನೆಗಳು ನಾಶವಾಗಿದ್ದು, 76,000 ಮನೆಗಳು ಹಾನಿಗೊಳಗಾಗಿವೆ ಎಂದು ವಿಶ್ವಸಂಸ್ಥೆಯ ಯುನಿಸೆಫ್ ಮಾಹಿತಿ ನೀಡಿದೆ. ಅಂದಾಜು 10 ಲಕ್ಷಕ್ಕೂ ಹೆಚ್ಚು ಮಕ್ಕಳು ತೊಂದರೆಗೊಳಗಾಗಿದ್ದಾರೆ. ಮೊದಲೇ ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಹೈಟಿಗೆ ಭೂಕಂಪನ ಭಾರಿ ಹೊಡೆತ ನೀಡಿದೆ.
ಇದನ್ನೂ ಓದಿ: ಭೂಕಂಪಕ್ಕೆ ತತ್ತರಿಸಿದ ಹೈಟಿ: ಸಾವಿನ ಸಂಖ್ಯೆ 1,419ಕ್ಕೆ ಏರಿಕೆ, 6000 ಮಂದಿಗೆ ಗಾಯ