ವಾಷಿಂಗ್ಟನ್ (ಅಮೆರಿಕ):ಜನವರಿ 6ರಂದು ಅಮೆರಿಕದಲ್ಲಿ ನಡೆದಿದ್ದ ಹಿಂಸಾಚಾರವು ಇಡೀ ಅಮೆರಿಕ ತಲೆತಗ್ಗಿಸುವಂತೆ ಮಾಡಿತ್ತು. ಘಟನೆಗೆ ಹಲವು ದೇಶಗಳ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದರು.
ಸದ್ಯ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ನೂತನ ಚುನಾಯಿತ ಅಧ್ಯಕ್ಷ ಜೋ ಬೈಡನ್ ಸರ್ಕಾರ ಈ ಕೃತ್ಯದಲ್ಲಿ ಭಾಗಿಯಾಗಿದ್ದವರ ಪತ್ತೆಗೆ ಮುಂದಾಗಿದೆ. ಈ ಕುರಿತು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮಾತನಾಡಿದ್ದು, ಈ ಘಟನೆಯಲ್ಲಿ ಸರ್ಕಾರದ ಯಾವುದೇ ಅಧಿಕಾರಿ ಅಥವಾ ಪ್ರತಿನಿಧಿ ಭಾಗಿಯಾಗಿರುವುದು ಸಾಬೀತಾದರೆ ಕಾನೂನು ರೀತಿಯ ಕ್ರಿಮಿನಲ್ ಆರೋಪ ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ನಾವು ಒಬ್ಬರನೊಬ್ಬರು ನಂಬಬೇಕು, ನಮ್ಮನ್ನು ಇಲ್ಲಿಗೆ ಕಳುಹಿಸಿದ ಜನರನ್ನು ಗೌರವಿಸಬೇಕು, ಸತ್ಯವಿರಬೇಕು ಎಂದಿದ್ದಾರೆ. ಘಟನೆ ಸಂಭವಿಸುವುದಕ್ಕೂ ಎರಡು ದಿನ ಮೊದಲು ಡೆಮಾಕ್ರಟಿಕ್ ಪಕ್ಷದ ಕೆಲ ನಾಯಕರು ರಾಜ್ಯ ಪೊಲೀಸರಿಗೆ ಪತ್ರ ಬರೆದು, ರಿಪಬ್ಲಿಕನ್ ಪಕ್ಷದ ಕೆಲ ನಾಯಕರ ಬೆಂಬಲ ಪಡೆದ ಕೆಲವರು ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದು ಅನುಮಾನಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದರು ಎಂದು ದಿ ಹಿಲ್ ಸುದ್ದಿ ಸಂಸ್ಥೆ ವರದಿ ಮಾಡಿದೆ.