ನ್ಯೂಯಾರ್ಕ್ :1993ರ ಮುಂಬೈ ಬಾಂಬ್ ಸ್ಫೋಟದ ಅಪರಾಧಿಗೆ ಪಾಕಿಸ್ತಾನ ಫೈವ್ ಸ್ಟಾರ್ ಆತಿಥ್ಯ ನೀಡಿದೆ. ಹೀಗಾಗಿ, ಸ್ಫೋಟಕ್ಕೆ ಕ್ರೈಮ್ ಸಿಂಡಿಕೇಟ್ ಕಾರಣ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಸ್ಪಷ್ಪಡಿಸಿದೆ. ಆ ಮೂಲಕ ದಾವೂದ್ ಇಬ್ರಾಹಿಂ ಪಾಕ್‌ನಲ್ಲೇ ಇದ್ದಾರೆ ಎಂಬುದನ್ನು ಉಲ್ಲೇಖಿಸಿದೆ.
ಗ್ಲೋಬಲ್ ಕೌಂಟರ್ ಟೆರರಿಸಂ ಕೌನ್ಸಿಲ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಸಮ್ಮೇಳನ-2022ರ ಸಭೆಯಲ್ಲಿ ನಿನ್ನೆ ಮಾತನಾಡಿದ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ ಎಸ್ ತಿರುಮೂರ್ತಿ, ಭಯೋತ್ಪಾದನೆ ಮತ್ತು ಅಂತಾರಾಷ್ಟ್ರೀಯ ಸಂಘಟಿತ ಅಪರಾಧಗಳ ನಡುವಿನ ಸಂಪರ್ಕವನ್ನು ಸಂಪೂರ್ಣವಾಗಿ ಗುರುತಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.
2022ರ ಯುಎನ್‌ಎಸ್‌ಸಿ ಭಯೋತ್ಪಾದನಾ ನಿಗ್ರಹ ಸಮಿತಿಯ ಅಧ್ಯಕ್ಷರೂ ಆಗಿರುವ ತಿರುಮೂರ್ತಿ, 1,267 ಅಲ್-ಖೈದಾ ನಿರ್ಬಂಧಗಳ ಸಮಿತಿ ಸೇರಿದಂತೆ ವಿಶ್ವಸಂಸ್ಥೆಯ ನಿರ್ಬಂಧದ ಸಂಘಟನೆಗಳು ಭಯೋತ್ಪಾದನೆಗೆ ಹಣಕಾಸು ನೀಡುತ್ತವೆ. ಪ್ರಯಾಣಕ್ಕೆ ವ್ಯವಸ್ಥೆ ಮಾಡುವ ಇವುಗಳ ಪ್ರವೇಶವನ್ನು ತಡೆಗಟ್ಟುವಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರಯತ್ನಗಳು ಪ್ರಮುಖವಾಗಿವೆ ಎಂದಿದ್ದಾರೆ.