ವಾಷಿಂಗ್ಟನ್: 'ಜಗತ್ತಿನಾದ್ಯಂತ ಸಾಂಕ್ರಾಮಿಕ ರೋಗ ಕೋವಿಡ್ ಭೀತಿ ಮುಂದುವರಿದಿದೆ. ಈ ಪಿಡುಗು ಶೀಘ್ರದಲ್ಲೇ ತೊಲಗಲಿದೆ' ಎಂದು ವಾಷಿಂಗ್ಟನ್‌ನಲ್ಲಿರುವ ವಿಜ್ಞಾನಿ ಮತ್ತು ವೈರಾಲಜಿಸ್ಟ್ ಡಾ.ಕುತುಬ್ ಮಹಮೂದ್ ಹೇಳುತ್ತಾರೆ. ಎಎನ್ಐ ಸುದ್ದಿಸಂಸ್ಥೆಯ ಜೊತೆ ಅವರು ಮಾತನಾಡಿದರು.
'ಕೋವಿಡ್‌ಗೆ ಲಸಿಕೆಯೇ ಪ್ರಮುಖ ಮತ್ತು ಬಲಿಷ್ಠ ಅಸ್ತ್ರ. ಜೊತೆಗೆ, ಈ ಪಿಡುಗು ಅಂತ್ಯವಾಗುವ ಕಾಲ ಹತ್ತಿರದಲ್ಲಿದೆ. ಈ ಚೆಸ್ ಆಟದಲ್ಲಿ ಯಾರೂ ವಿನ್ನರ್ ಅಲ್ಲ. ಇದು ಡ್ರಾ ಆಗಲಿದೆ. ವೈರಸ್ ಅಡಗಿಕೊಳ್ಳುತ್ತದೆ. ನಾವು ಮಾಸ್ಕ್ನಿಂದ ಹೊರಬಂದು ಜಯಿಸುತ್ತೇವೆ. ಆದ್ದರಿಂದ ನಾವೆಲ್ಲರೂ ಆಶಾಭಾವದಿಂದ ಮುನ್ನುಗ್ಗಬೇಕು. ಸದ್ಯದಲ್ಲೇ ಎಲ್ಲವೂ ಮುಗಿಯಲಿದೆ' ಎಂಬ ಭರವಸೆಯ ಮಾತುಗಳನ್ನಾಡಿದರು.
'ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತಿದ್ದು, ಇದಕ್ಕೆ ಹೊಂದಿಕೊಳ್ಳಲು ವೈರಸ್ ಮೇಲೆ ಒತ್ತಡವಾಗುತ್ತಿದೆ. ಆದ್ದರಿಂದ ಇದು ರೂಪಾಂತರಿಗಳನ್ನು ಸೃಷ್ಟಿಸುತ್ತಿದೆ. ಇದೊಂದು ರೀತಿ ಆಟ. ಮನುಷ್ಯ ಮತ್ತು ವೈರಸ್ ನಡುವಿನ ಹೋರಾಟ. ನಾವು ನಮ್ಮ ನಡೆ ಮುಂದುವರಿಸಿದ್ರೆ, ವೈರಸ್ ತನ್ನ ಆಟ ಆಡುತ್ತದೆ. ನಮ್ಮ ನಡೆ ಅಂದ್ರೆ ಫೇಸ್ ಮಾಸ್ಕ್, ಹ್ಯಾಂಡ್ ಸ್ಯಾನಿಸೈಜರ್, ಸಾಮಾಜಿಕ ಅಂತರ. ಇದರೊಂದಿಗೆ ಪ್ರಮುಖ ಅಸ್ತ್ರವಾಗಿ ಲಸಿಕೆ ಬಳಸುವುದು. ಹಾಗಾದ್ರೂ ಕೋವಿಡ್ ರೂಪಾಂತರಿ ಬರಲ್ಲ ಅಂತಲ್ಲ, ಮುಂದೆ ಮತ್ತೊಂದು ರೂಪಾಂತರಿ ಬಂದರೂ ಅಚ್ಚರಿ ಇಲ್ಲ. ಆದ್ರೆ ಲಸಿಕೆ ಇದಕ್ಕೆಲ್ಲ ಅಸ್ತ್ರವಾಗಲಿದೆ. ಅದಕ್ಕಾಗಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು' ಎಂದು ಸಲಹೆ ನೀಡಿದರು.