ಸ್ಯಾಂಟಿಯಾಗೊ (ಚಿಲಿ): ಚೀನಾದ ಕೋವಿಡ್ ಲಸಿಕೆಗಳ ಮೇಲೆ ಅವಲಂಬಿತರಾಗಿದ್ದ ಚಿಲಿ, ಸೀಚೆಲ್ಸ್, ಮಂಗೋಲಿಯಾ ಮತ್ತು ಬಹ್ರೇನ್ ರಾಷ್ಟ್ರಗಳಲ್ಲಿ ಬಹುಪಾಲು ಜನರಿಗೆ ವ್ಯಾಕ್ಸಿನ್ ನೀಡಿದ ಬಳಿಕವೂ ಮತ್ತೆ ಸಾಂಕ್ರಾಮಿಕ ಉಲ್ಬಣಿಸಿರುವುದು ವರದಿಯಾಗಿದೆ.
ಇತ್ತೀಚಿನ ತಿಂಗಳುಗಳಲ್ಲಿ ಈ ನಾಲ್ಕು ದೇಶಗಳಿಗೆ ಚೀನಾ ಒದಗಿಸಿದ ಕೋವಿಡ್ ಲಸಿಕೆಯ ಲಕ್ಷಾಂತರ ಡೋಸ್ಗಳು ಸೋಂಕಿನ ವಿರುದ್ಧ, ವಿಶೇಷವಾಗಿ ಹೊಸ ರೂಪಾಂತರಗಳ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿಲ್ಲದೇ ಇರುವುದೇ ಕೊರೊನಾ ಉಲ್ಬಣದ ಪ್ರಮುಖ ಕಾರಣಗಳಲ್ಲೊಂದು. ಮೊದಲ ಡೋಸ್ ಪಡೆದ ಅನೇಕರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಚೀನಾ ತನ್ನ ಲಸಿಕೆಗಳ ಪರಿಣಾಮಕಾರಿತ್ವದ ಕುರಿತು ಸರಿಯಾದ ಮಾಹಿತಿ ಹಂಚಿಕೊಂಡಿಲ್ಲ ಎಂದು ಕೆಲವು ತಜ್ಞರು ಹೇಳಿದ್ದಾರೆ.
ಸಿನೋವಾಕ್ - ಸಿನೊಫಾರ್ಮ್
ದೇಶೀಯವಾಗಿ ಅಭಿವೃದ್ಧಿಪಡಿಸಿದ ಏಳು ಲಸಿಕೆಗಳನ್ನು ಚೀನಾ ಅನುಮೋದಿಸಿದೆ. ಇವುಗಳಲ್ಲಿ ಪ್ರಪಂಚದಾದ್ಯಂತ ವ್ಯಾಪಕವಾಗಿ ಲಭ್ಯವಿರುವ ಸಿನೋವಾಕ್ ಮತ್ತು ಸಿನೊಫಾರ್ಮ್ ಸಂಸ್ಥೆ ಅಭಿವೃದ್ಧಿಪಡಿಸಿದ ಲಸಿಕೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆ(WHO) ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಸಿನೋವಾಕ್‌ನ ಕೊರೊನಾವಾಕ್ ಲಸಿಕೆಯು ಶೇ.51ರಷ್ಟು ಹಾಗೂ ಸಿನೊಫಾರ್ಮ್ ಲಸಿಕೆಯು ಶೇ.79ರಷ್ಟು ಮಾತ್ರ ಪರಿಣಾಮಕಾರಿತ್ವವನ್ನು ಹೊಂದಿದೆ. ಆದರೆ ಫೈಜರ್, ಮಾಡರ್ನಾ, ಸ್ಪುಟ್ನಿಕ್ ಲಸಿಕೆಗಳು ಕ್ಲಿನಿಕಲ್ ಪ್ರಯೋಗಗಳಲ್ಲಿ ಶೇ.90ಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ.
ಚೀನಾದ ಲಸಿಕೆಗಳನ್ನು ಹೆಚ್ಚಾಗಿ ಅವಲಂಬಿಸಿರುವ ಮಂಗೋಲಿಯಾದಲ್ಲಿ ಭಾನುವಾರದಿಂದ ಸುಮಾರು 2,400 ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಇದು ಒಂದು ತಿಂಗಳ ಹಿಂದಿನಿಂದ ನಾಲ್ಕು ಪಟ್ಟು ಹೆಚ್ಚಾಗಿದೆ. ಮಂಗೋಲಿಯಾ ಜನಸಂಖ್ಯೆಯ ಶೇ. 58.7 ಜನರಿಗೆ ಕನಿಷ್ಠ ಒಂದು ಡೋಸ್ ವ್ಯಾಕ್ಸಿನ್ ನೀಡಲಾಗಿದೆ.