ವಾಷಿಂಗ್ಟನ್:ಹೆಚ್ -1ಬಿ ವೀಸಾ ಹೊಂದಿರುವವರು ಮತ್ತು ಗ್ರೀನ್ ಕಾರ್ಡ್ ಅರ್ಜಿದಾರರಿಗೆ ವಿವಿಧ ದಾಖಲೆಗಳನ್ನು ಸಲ್ಲಿಸಲು ನೋಟಿಸ್ ನೀಡಿದ್ದ ಯುಎಸ್ ಸರ್ಕಾರ ಇದೀಗ ಹೆಚ್ಚುವರಿ 60 ದಿನಗಳ ಕಾಲಾವಕಾಶವನ್ನು ನೀಡಿದೆ. ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ದೃಷ್ಟಿಯಿಂದ ಈ ನಿರ್ಧಾರಕ್ಕೆ ಯುಎಸ್ ಸರ್ಕಾರ ಬಂದಿದೆ.
ಹೆಚ್ -1ಬಿ ವೀಸಾ ಎಂದರೇನು?
ಹೆಚ್ -1ಬಿ ವೀಸಾ, ಅಮೆರಿಕದಲ್ಲಿ ಕೆಲಸ ಮಾಡಲು ವಿದೇಶಿಗರಿಗೆ ಅವಕಾಶ ನೀಡುವ ತಾತ್ಕಾಲಿಕ ವೀಸಾ ಆಗಿದೆ. US ಉದ್ಯಮ ಮಾಲೀಕರಿಗೆ ವಿಶೇಷ ಕೌಶಲದ ವೃತ್ತಿಗಳಲ್ಲಿ ವಿದೇಶಿ ನೌಕರರನ್ನು ನೇಮಿಸಿಕೊಳ್ಳಲು ಈ ವೀಸಾ ಅವಕಾಶ ನೀಡುತ್ತದೆ. ಆದರೆ ಇದು ತಾತ್ಕಾಲಿಕವಾಗಿದ್ದು, ಗರಿಷ್ಟ 6 ವರ್ಷಗಳ ಅನುಮತಿ ಇರುತ್ತದೆ.
ಗ್ರೀನ್ ಕಾರ್ಡ್ ಎಂದರೆ..
ಗ್ರೀನ್ ಕಾರ್ಡ್ ಅಥವಾ ಶಾಶ್ವತ ನಿವಾಸ ಕಾರ್ಡ್, ಅಮೆರಿಕದಲ್ಲಿ ಶಾಶ್ವತವಾಗಿ ವಾಸಿಸಲು ಮತ್ತು ಕೆಲಸ ಮಾಡಲು ವಿದೇಶಿಗರಿಗೆ ಅನುಮತಿ ನೀಡುವ ಕಾರ್ಡ್ ಆಗಿದೆ. ಗ್ರೀನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಕೆಲವೊಂದು ನಿಯಮಗಳಿರುತ್ತದೆ. ಅದು ಅರ್ಜಿದಾರನ ವೈಯಕ್ತಿಕ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತವೆ.
ಯುನೈಟೆಡ್ ಸ್ಟೇಟ್ಸ್ ಸಿಟಿಸನ್ಶಿಪ್ ಆ್ಯಂಡ್ ಇಮಿಗ್ರೇಷನ್ ಸರ್ವಿಸಸ್(USCIS) ಅಮೆರಿಕದ ವಲಸೆ ವ್ಯವಸ್ಥೆಯನ್ನು ನಿರ್ವಹಿಸುವ ಸಂಸ್ಥೆಯಾಗಿದ್ದು, ಈಗಾಗಲೇ ಹೆಚ್ -1ಬಿ ವೀಸಾ ಹೊಂದಿರುವವರು ಮತ್ತು ಅಮೆರಿಕದಲ್ಲಿ ಖಾಯಂ ವಾಸಕ್ಕಾಗಿ ಅರ್ಜಿ ಸಲ್ಲಿಸಿರುವ ಗ್ರೀನ್ ಕಾರ್ಡ್ ಅರ್ಜಿದಾರರಿಗೆ ಸೂಕ್ತ ದಾಖಲೆಗಳನ್ನು ಒದಗಿಸಲು ಮತ್ತೆ 60 ದಿನಗಳ ಕಾಲಾವಕಾಶ ನೀಡಿದೆ. ದೇಶದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ತೀರ್ಮಾನಕ್ಕೆ ಬರಲಾಗಿದೆ.
ದೇಶದಲ್ಲಿ ಕೊರೊನಾ ವೈರಸ್ ಹರಡಿರುವ ಈ ಕ್ಲಿಷ್ಟಕರ ಸಮಯದಲ್ಲಿ ವಲಸೆ ಪರಿಣಾಮಗಳನ್ನು ಕಡಿಮೆ ಮಾಡಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು USCIS ತಿಳಿಸಿದೆ.