ಅಟ್ಲಾಂಟ :ಕೋಕಾ-ಕೋಲಾ ಕಂಪನಿಯು ತನ್ನ ವ್ಯಾಪಾರ ಘಟಕಗಳು ಮತ್ತು ಬ್ರ್ಯಾಂಡ್‌ಗಳನ್ನು ಬೇರ್ಪಡಿಸುವ ಗುರಿ ಹೊಂದಿದ್ದು, ಈ ಹಿನ್ನೆಲೆಯಲ್ಲಿ 2,200 ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಲಿದೆ ಎಂದು ಹೇಳಿದೆ.
ಅಮೆರಿಕಾದಲ್ಲಿ ಈಗಾಗಲೇ ಅರ್ಧದಷ್ಟು ಜನರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದೆ. ಕೋಕ್ 2019ರ ಕೊನೆಯಲ್ಲಿ ವಿಶ್ವದಾದ್ಯಂತ 86,200 ಜನರಿಗೆ ಉದ್ಯೋಗ ನೀಡಿದೆ. ಆದರೆ, ಲಾಕ್‌ಡೌನ್ ಬಳಿಕ ಕ್ರೀಡಾಂಗಣಗಳು ಮತ್ತು ಚಿತ್ರಮಂದಿರಗಳಂತಹ ಅನೇಕ ಸ್ಥಳಗಳು ಬಂದ್ ಆಗಿದ್ದು, ಈ ಪರಿಣಾಮ ಮಾರಾಟದ ಮೇಲೆ ತೀವ್ರ ಪರಿಣಾಮ ಬೀರಿದೆ.
ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಆದಾಯವು ಶೇ.9ರಷ್ಟು ಕುಸಿದು 8.7 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ಸಂಸ್ಥೆ ತಿಳಿಸಿದೆ. ಕೋಕ್ ತನ್ನ ಬ್ರ್ಯಾಂಡ್‌ಗಳನ್ನು ಅರ್ಧಕ್ಕೆ ಇಳಿಸುತ್ತಿದೆ. ಅಂದರೆ ಟ್ಯಾಬ್, ಜಿಕೊ ಎಳನೀರು, ಡಯಟ್ ಕೋಕ್ ಫಿಯೆಸ್ಟಿ ಚೆರ್ರಿ ಮತ್ತು ಒಡ್ವಾಲ್ಲಾ ಜ್ಯೂಸ್‌ಗಳನ್ನು ಒಳಗೊಂಡಂತೆ ಕೆಲ ಜ್ಯೂಸ್‌ಗಳನ್ನು ಈ ವರ್ಷ ಕೈಬಿಡಲಿದೆ ಎಂದು ತಿಳಿಸಿದೆ.
ಮುಖ್ಯವಾಗಿ ಕೋಕ್ ತನ್ನ ವ್ಯವಹಾರ ವಿಭಾಗಗಳನ್ನು 17ರಿಂದ 9ಕ್ಕೆ ಇಳಿಸುತ್ತಿದೆ. ವಿಭಜಿಸುವ ಕಾರ್ಯಕ್ರಮಗಳಿಗೆ 350 ಮಿಲಿಯನ್ ಡಾಲರ್ನಿಂದ 550 ಮಿಲಿಯನ್ ಡಾಲರ್ಗಳಷ್ಟು ವೆಚ್ಚವಾಗಲಿದೆ ಎಂದು ಹೇಳಿದೆ.