ವಾಷಿಂಗ್ಟನ್:ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಐದು ತಿಂಗಳ ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್ಎಸ್ಸಿ) ಸಭೆಯಲ್ಲಿ ಅನೌಪಚಾರಿಕ-ಮುಚ್ಚಿದ ಬಾಗಿಲ ಸಮಾಲೋಚನೆ ನಡೆಸಲು ಚೀನಾ ಯಶಸ್ವಿಯಾದರೂ ತೀವ್ರ ಮುಖಭಂಗ ಅನುಭವಿಸಿದೆ.
ಆಫ್ರಿಕನ್ ದೇಶಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಗೌಪ್ಯ (ಮುಚ್ಚಿದ ಬಾಗಿಲು) ಸಭೆ ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಚೀನಾ, ಕಾಶ್ಮೀರ ವಿಷಯದ ಬಗ್ಗೆ ಉದ್ದೇಶಪೂರ್ವಕವಾಗಿ ಪ್ರಸ್ತಾಪಿಸಿ ಮುಜುಗರಕ್ಕೆ ಒಳಗಾಯಿತು.
ಚೀನಾ ರಾಯಭಾರಿ ಜಾಂಗ್ ಮಾತನಾಡಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಉಲ್ಭಣಗೊಂಡಿರುವ ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ಸಂವಾದದ ಮೂಲಕ ಪರಿಹಾರ ಪಡೆಯಲು ಎರಡೂ ದೇಶಗಳನ್ನು ಮುಂದಾಗಬೇಕು ಎಂದು ಹೇಳಿದರು.
ವಿಶೇಷ ಸ್ಥಾನಮಾನ ರದ್ದಾದ ಬಳಿಕ ಅಲ್ಲಿನ ಜನರು ತೊಂದರೆಗೆ ಒಳಗಾಗಿದ್ದಾರೆ. ಆದ್ದರಿಂದ ಉಭಯ ರಾಷ್ಟ್ರಗಳು ವಿವಾದ ಅಂತ್ಯಕ್ಕೆ ದ್ವಿಪಕ್ಷೀಯ ಸಮಾಲೋಚನೆ ನಡೆಸಬೇಕು. ಅದಕ್ಕಾಗಿ ಯುಎನ್ಎಸ್ಸಿ ಸದಸ್ಯರು ಕೂಡ ಸಹಕಾರ ನೀಡಬೇಕು ಎಂದು ಪಾಕಿಸ್ತಾನದ ಪರ ಬ್ಯಾಟ್ ಬೀಸಿದರು.
ಆದರೆ, ಸಭೆಯಲ್ಲಿದ್ದ ಬೇರೆ ರಾಷ್ಟ್ರಗಳ ಸದಸ್ಯರು ಇದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ. ನಮ್ಮ ಧ್ವಜ ಎತ್ತರದಲ್ಲಿ ಹಾರುತ್ತಿದೆ. ಸುಳ್ಳಿನ ಧ್ವಜ ಹಾರಿಸಲು ಮುಂದಾದವರಿಗೆ ನಮ್ಮ ಅನೇಕ ಸ್ನೇಹಿತರು ಕುಟುಕಿದ್ದಾರೆ ಎಂದು ಭಾರತದ ರಾಯಭಾರಿ ಸಯ್ಯದ್ ಅಕ್ಬರುದ್ದೀನ್ ಟ್ವೀಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.