ಕರ್ನಾಟಕ

karnataka

ಭವಿಷ್ಯದಲ್ಲಿ ಅಮೆರಿಕಕ್ಕೆ ಚೀನಾ ಬಹುದೊಡ್ಡ ಬೆದರಿಕೆ: ಎಫ್​ಬಿಐ

By

Published : Jul 8, 2020, 6:01 PM IST

ಚೀನಾ ವಿಶ್ವದ ಸೂಪರ್ ಪವರ್ ರಾಷ್ಟ್ರವಾಗಲು ಎಲ್ಲಾ ರೀತಿಯ ತಂತ್ರಗಳನ್ನು ಅನುಸರಿಸುತ್ತಿದ್ದು, ಅಮೆರಿಕಕ್ಕೆ ಬಹುದೊಡ್ಡ ಬೆದರಿಕೆಯಾಗಲಿದೆ ಎಂದು ಎಫ್​ಬಿಐ ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ.

FBI director
ಎಫ್​ಬಿಐ ನಿರ್ದೇಶಕರು

ವಾಷಿಂಗ್ಟನ್​ ಡಿಸಿ (ಅಮೆರಿಕ):ಚೀನಾದ ಇತ್ತೀಚಿನ ನಡವಳಿಕೆಗಳನ್ನು ಗಮನಿಸಿದರೆ ಭವಿಷ್ಯದಲ್ಲಿ ಅಮೆರಿಕಕ್ಕೆ ಚೀನಾ ಅತಿ ದೊಡ್ಡ ಬೆದರಿಕೆಯಾಗಲಿದೆ ಎಂದು ಫೆಡರಲ್​ ಬ್ಯೂರೋ ಆಫ್​ ಇನ್ವೆಸ್ಟಿಗೇಷನ್​ (ಎಫ್​​ಬಿಐ) ನಿರ್ದೇಶಕ ಕ್ರಿಸ್ಟೋಫರ್ ವ್ರೇ ಕಳವಳ ವ್ಯಕ್ತಪಡಿಸಿದ್ದಾರೆ.

ವಾಷಿಂಗ್ಟನ್​ನಲ್ಲಿರುವ ಹಡ್ಸನ್​ ಇನ್ಸ್​ಟಿಟ್ಯೂಟ್​ನಲ್ಲಿ ನಡೆದ ಅಭಿಯಾನವೊಂದರಲ್ಲಿ ಮಾತನಾಡಿದ ಅವರು ಚೀನಾ, ಅಮೆರಿಕದಲ್ಲಿ ಕೊರೊನಾ ವೈರಸ್ ಕುರಿತ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ತನ್ನ ದೇಶದ ಪ್ರಜೆಗಳನ್ನು ಗುರಿಯಾಗಿಸಿಕೊಂಡಿದ್ದು, ವಾಪಸ್ ಕರೆಸಿಕೊಳ್ಳಲು ಒತ್ತಾಯಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇದರ ಜೊತೆಗೆ ವಿಶ್ವದ ಅತ್ಯಂತ ಶಕ್ತಿಶಾಲಿ ಹಾಗೂ ಸೂಪರ್ ಪವರ್ ರಾಷ್ಟ್ರವಾಗಲು ಚೀನಾ ಹವಣಿಸುತ್ತಿದೆ ಎಂದ ಅವರು ಅಮೆರಿಕದ ಕಾನೂನುಗಳ ಮೇಲೆ ಚೀನಾ ಪ್ರಭಾವ ಬೀರಲು ಯತ್ನಿಸುತ್ತಿದೆ. ಅಕ್ರಮ ರಾಜಕೀಯ ಚಟುವಟಿಕೆಗಳನ್ನು ನಡೆಸುತ್ತಿದೆ. ಮಾಹಿತಿ ಕದಿಯುವಿಕೆಯಲ್ಲಿ ಪಾಲ್ಗೊಂಡಿದೆ ಎಂದು ತೀವ್ರವಾಗಿ ಆರೋಪಿಸಿದ್ದಾರೆ.

ಚೀನಾದಿಂದ 10 ಗಂಟೆಗೆ ಒಂದರಂತೆ ಗೂಢಾಚಾರಿಕೆ ಪ್ರಕರಣಗಳು ವರದಿಯಾಗುತ್ತಿದ್ದು, ಅಮೆರಿಕದಲ್ಲಿ ಈಗ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಚೀನಾಗೆ ಸಂಬಂಧಿಸಿದ ಪ್ರಕರಣಗಳಾಗಿವೆ ಎಂದು ಕ್ರಿಸ್ಟೋಫರ್ ವ್ರೇ ಮಾಹಿತಿ ಹೊರಹಾಕಿದ್ದಾರೆ.

ಚೀನಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದ್ದು, ಇವುಗಳ ಕುರಿತು ಕೆಲವು ದೇಶಗಳೊಂದಿಗೆ ನಾವು ಮಾತನಾಡಿದ್ದೇವೆ. ಬೇರೆ ದೇಶಗಳಲ್ಲಿ ಚೀನಿ ಪ್ರಜೆಗಳ ಮೇಲೆ ವಾಪಸ್ಸಾಗುವಂತೆ ಒತ್ತಾಯ ಮಾಡುತ್ತಿರುವ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಾರತದೊಂದಿಗಿನ ಸಂಬಂಧ ಹದಗೆಟ್ಟಾಗಿನಿಂದ ಚೀನಾದ ವಿರುದ್ಧ ಕೆಲವು ರಾಷ್ಟ್ರಗಳು ತಿರುಗಿಬಿದ್ದಿವೆ. ಇದರಲ್ಲಿ ಅಮೆರಿಕ ಕೂಡಾ ಹೊರತೇನಲ್ಲ. ಭಾರತದ ಆ್ಯಪ್​ ಬ್ಯಾನ್​ನಂತಹ ಕ್ರಮಗಳನ್ನು ಅಲ್ಲಿಯೂ ಕೂಡಾ ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಅಮೆರಿಕದ ಸ್ಟೇಟ್​ ಸೆಕ್ರೆಟರಿ ಮೈಕ್​ ಪೋಂಪಿಯೋ ಹೇಳಿದ್ದು ಕೂಡಾ ಚೀನಾದ ವಿರುದ್ಧ ಅಮೆರಿಕದ ದ್ವೇಷವನ್ನು ಬಹಿರಂಗಪಡಿಸಿದೆ.

ABOUT THE AUTHOR

...view details