ಚಿಕಾಗೋ:ಕೋವಿಡ್ ವೈರಸ್ ಲಾಕ್ಡೌನ್ ಸೇರಿದಂತೆ ಹಲವು ಒತ್ತಡಗಳಿಂದ ಹೊರ ಬರುವ ಸಲುವಾಗಿ ವ್ಯಕ್ತಿಯೊಬ್ಬ ಕೆರೆಗೆ ಹಾರುವುದನ್ನು ಅಭ್ಯಾಸ ಮಾಡಿಕೊಂಡಿದ್ದು, ಕಳೆದ ಶನಿವಾರ 365ನೇ ಬಾರಿಗೆ ಕೆರೆಗೆ ಹಾರಿದ್ದಾನೆ. ಚಿಕಾಗೋ ನಗರದ ನಿವಾಸಿ ಡಾನ್ ಓ ಕಾನರ್ ಹೀಗೆ ಸತತವಾಗಿ ಕೆರೆಗೆ ಹಾರುತ್ತಿರುವ ವ್ಯಕ್ತಿ.
ಈತ ಒತ್ತಡವನ್ನು ನಿವಾರಿಸುವ ಸಲುವಾಗಿ ಕಳೆದ ವರ್ಷ ನಗರದ ಉತ್ತರ ಭಾಗದಲ್ಲಿರುವ ಮಾಂಟ್ರೋಸ್ ಬಂದರಿನ ಸರೋವರಕ್ಕೆ ಮೊದಲ ಬಾರಿಗೆ ಹಾರಿದ್ದ. ಅಲ್ಲಿಂದ ಸತತವಾಗಿ ಕೆರೆಗೆ ಹಾರುತ್ತಿದ್ದಾನೆ.
ಸಾಂಕ್ರಾಮಿಕ ರೋಗ, ಪ್ರತಿಭಟನೆ, ಚುನಾವಣೆ ಹೀಗೆ ಹಲವು ಸಂದರ್ಭಗಳಲ್ಲಿ ಒತ್ತಡಗಳಿಂದ ಹೊರ ಬಂದು ನಾನು ಇಲ್ಲಿ ಕೆರೆಗೆ ಹಾರುತ್ತಾ ರಿಲ್ಯಾಕ್ಸ್ ಆಗುತ್ತೇನೆ. ಇಲ್ಲಿ ಯಾವುದೇ ಶಬ್ದ ಇರುವುದಿಲ್ಲ. ಅಲ್ಲದೆ, ಕೆರೆಯೊಂದಿಗೆ ನಾನು ಸಂಪೂರ್ಣವಾಗಿ ಸಮಯ ಕಳೆಯಬಹುದು ಎಂದು ಮೂರು ಮಕ್ಕಳ ತಂದೆ ಕಾನರ್ ಹೇಳಿದ್ದಾನೆ.
ರಕ್ತ ಹೆಪ್ಪುಗಟ್ಟುವ ಚಳಿಗಾಲದಲ್ಲೂ ಕಾನರ್ ಸರೋವರಗಳಿಗೆ ಹಾರಿದ್ದಾನೆ. ಒಂದು ಸಲ ಹೆಪ್ಪುಗಟ್ಟಿದ ಸರೋವರಕ್ಕೆ ಹಾರಿ ಮಂಜುಗಡ್ಡೆ ಒಡೆಯುವ ಪ್ರಯತ್ನ ಮಾಡಿದಾಗ ಕಾನರ್ ದೇಹದ ಮೇಲೆ 20 ಕಡೆ ತರಚಿದ ಗಾಯಗಳಾಗಿತ್ತಂತೆ. ಆದರೂ ಅಭ್ಯಾಸ ಬಿಡದ ಈತ ಕೆರೆಗೆ ಹಾರುವುದನ್ನು ಮುಂದುವರೆಸಿದ್ದಾನೆ.
ಹೀಗೆ, ಕೆರೆಗೆ ಹಾರುವುದರಿಂದ ನಿಮಗೆ ಏನು ಪ್ರಯೋಜನ, ಇದೆಕ್ಕೆ ಯಾವ ರೀತಿ ಬೆಂಬಲ ಸಿಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಕಾನರ್, ನಾನು ಕೆರೆಗೆ ಹಾರುವ ನನ್ನ ಸಾಹಸದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತೇನೆ. ಜನ ಅದಕ್ಕೆ ಲೈಕ್ ಕೊಟ್ಟು, ಕಮೆಂಟ್ ಮಾಡುತ್ತಾರೆ. ಅದು ನನಗೆ ಖಷಿ ಕೊಡುತ್ತದೆ ಎಂದಿದ್ದಾರೆ.