ವಾಷಿಂಗ್ಟನ್ (ಅಮೆರಿಕ) : ಕಳೆದ ಬುಧವಾರ ಕ್ಯಾಪಿಟಲ್ ಮೇಲೆ ಟ್ರಂಪ್ ಬೆಂಬಲಿಗರು ದಾಳಿ ನಡೆಸುವ ವೇಳೆ, ಜನರನ್ನು ನಿಯಂತ್ರಿಸಲು ಪೊಲೀಸರು ಸಿಬ್ಬಂದಿಯನ್ನು ಹೆಚ್ಚಿಸಲಿಲ್ಲ. ಪರಿಸ್ಥಿತಿ ಉಲ್ಬಣಗೊಳ್ಳುತ್ತದೆ ಎಂದು ತಿಳಿದಿದ್ದರೂ ಅಧಿಕಾರಿಗಳು ಯಾವುದೇ ಸಿದ್ಧತೆ ಮಾಡಿಕೊಳ್ಳಲಿಲ್ಲ ಎಂದು ಹಲವಾರು ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಪ್ರತಿಭಟನೆ ನಡೆಯುತ್ತಿದ್ದರೂ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಿಲ್ಲ. ಬದಲಾಗಿ ಎಂದಿನಂತೆ ಕಾರ್ಯ ನಿರ್ವಹಿಸುವ ಸಿಬ್ಬಂದಿ ಮಾತ್ರ ಇದ್ದರು. ಅಲ್ಲದೆ, ಪ್ರತಿಭಟನಾಕಾರರು ದಾಳಿ ನಡೆಸುವಾಗ ಜನಸಮೂಹ ನಿಯಂತ್ರಿಸಲು ಪೊಲೀಸರು ಯಾವುದೇ ರೀತಿಯ ಬಲ ಪ್ರಯೋಗ ಮಾಡದಂತೆ ಪೊಲೀಸ್ ಲೆಫ್ಟಿನೆಂಟ್ ಅಧಿಕಾರಿ ಆದೇಶ ಹೊರಡಿಸಿದ್ದರು.
ಪ್ರತಿಭಟನಾಕಾರರಿಗಿಂತಲೂ ಪೊಲೀಸರ ಸಂಖ್ಯೆ ಕಡಿಮೆಯಿದ್ದು, ದಾಳಿಯನ್ನು ಹತ್ತಿಕ್ಕಲು ಸಾಧ್ಯವಾಗಲಿಲ್ಲ. ಈ ಘಟನೆ ಪ್ರತಿಭಟನಾಕಾರರ ಮುಂದೆ ಪೊಲೀಸರ ದುರ್ಬಲತೆ ಅನಾವರಣಕ್ಕೆ ಸಾಕ್ಷಿಯಾಯಿತು. ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಂಸತ್ನ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಇಲಾಖೆಯ ಮುಖ್ಯಸ್ಥರ ವಿರುದ್ಧ ಗುಡುಗಿದ್ದಾರೆ.
ಕೆಲವು ಗಲಭೆಕೋರರು ಕಾಂಗ್ರೆಸ್ (ಅಮೆರಿಕ ಸಂಸತ್) ಸದಸ್ಯರನ್ನು ಅಪಹರಿಸಲು ಯೋಜನೆ ರೂಪಿಸಿದ್ದರು ಎನ್ನಲಾಗಿದ್ದು, ಎಫ್ಬಿಐ ಈ ಬಗ್ಗೆ ತನಿಖೆ ನಡೆಸುತ್ತಿದೆ. ಈ ಸಮಯವನ್ನು ಬಳಸಿಕೊಂಡ ಕೆಲವರು ಕೈಗೆ ಸಿಕ್ಕದ್ದನ್ನೆಲ್ಲ ದೋಚಿಕೊಂಡು ಹೋಗಿದ್ದಾರೆ.
ಮೊದಲು ಕ್ಯಾಪಿಟಲ್ ಪ್ರವೇಶಿಸಲು ಯತ್ನಿಸಿದ ಇಬ್ಬರನ್ನು ಎಫ್ಬಿಐ ಬಂಧಿಸಿದ್ದು ವಿಚಾರಣೆ ನಡೆಸುತ್ತಿದೆ.