ಕೆನಡಾ: ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ದೇಶ ಬಿಟ್ಟು ಹೋಗುತ್ತಿದ್ದಂತೆ ರಾಜಧಾನಿ ಕಾಬೂಲ್ ವಶಕ್ಕೆ ಪಡೆಯುವ ಮೂಲಕ ತಾಲಿಬಾನ್, ಇಡೀ ಅಫ್ಘಾನಿಸ್ತಾನ ರಾಷ್ಟ್ರವನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದೆ. ಅಲ್ಲದೇ ನೂತನ ಸರ್ಕಾರ ರಚಿಸುವ ಉತ್ಸಾಹದಲ್ಲಿದ್ದಾರೆ. ಈ ಕುರಿತಂತೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಪ್ರತಿಕ್ರಿಯಿಸಿದ್ದಾರೆ.
ತಾಲಿಬಾನ್ ಅಟ್ಟಹಾಸದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ತಾಲಿಬಾನ್ ಅನ್ನು ಅಧಿಕೃತ ಅಫ್ಘಾನ್ ಸರ್ಕಾರ ಎಂದು ನಾವು ಒಪ್ಪಿಕೊಳ್ಳುವುದಿಲ್ಲ. ಅಫ್ಘಾನಿಸ್ತಾನದಿಂದ ಜನರನ್ನು ಹೊರಗೆ ಕರೆದುಕೊಂಡು ಬರುವುದರ ಮೇಲೆ ನಮ್ಮ ಗಮನವಿದೆ. ಜನರು ವಿಮಾನ ನಿಲ್ದಾಣಕ್ಕೆ ಹೋಗಲು ಉಚಿತ ಪ್ರವೇಶವನ್ನು ತಾಲಿಬಾನ್ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಯಾವುದೇ ಕಾರಣಕ್ಕೂ ತಾಲಿಬಾನ್ಗೆ ಶರಣಾಗಲ್ಲ..ನಾನೇ ಅಫ್ಘಾನ್ ಅಧ್ಯಕ್ಷ ಎಂದ ಮಾಜಿ ಉಪಾಧ್ಯಕ್ಷ!
ಅಫ್ಘಾನಿಸ್ತಾನವನ್ನು ತಾಲಿಬಾನ್ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದಂತೆ ಭೀತಿಗೊಳಗಾದ ಸಾವಿರಾರು ಮಂದಿ ಅಫ್ಘಾನಿಸ್ತಾನದಿಂದ ಪಲಾಯಗೈಯಲು ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲಗ್ಗೆ ಇಡುತ್ತಿದ್ದಾರೆ. ವಿಮಾನದ ಮೂಲಕ ಜನರು ಪಲಾಯನವಾಗಲು ಯತ್ನಿಸುತ್ತಿರುವ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಜನರ ನೂಕುನುಗ್ಗಲು, ಗುಂಪನ್ನು ಚದುರಿಸಲು ಅಮೆರಿಕ ಸೇನಾಪಡೆಗಳು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ ದೃಶ್ಯ ಕೂಡ ವೈರಲ್ ಆಗಿತ್ತು.
ಯುಎಸ್, ಯುಕೆ ಮತ್ತು ಕೆನಡಾ ಸೇರಿದಂತೆ ಕೆಲವು ದೇಶಗಳು ತಾಲಿಬಾನ್ ನಡೆಗೆ ಆಕ್ರೋಶ ವ್ಯಕ್ತಪಡಿಸಿವೆ. ಪಾಕಿಸ್ತಾನ, ರಷ್ಯಾ, ಟರ್ಕಿ ಮತ್ತು ಚೀನಾದಂತಹ ಇತರೆ ಕೆಲವು ದೇಶಗಳು ತಾಲಿಬಾನ್ ಆಡಳಿತವನ್ನು ಶ್ಲಾಘಿಸುತ್ತಿವೆ.