ಬ್ರೆಸಿಲಿಯಾ:ಜಗತ್ತಿನ ಕೋವಿಡ್ ಪ್ರಕರಣಗಳ ಪೈಕಿ ಭಾರತ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿದಿರುವ ಬ್ರೆಜಿಲ್ನಲ್ಲಿ ಸೋಂಕಿತರ ಸಂಖ್ಯೆ 12 ಮಿಲಿಯನ್ ಗಡಿ ದಾಟಿರುವುದಾಗಿ ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.
ಮಾಜಿ ಹಣಕಾಸು ಸಚಿವರು, ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರು ಸೇರಿದಂತೆ ಸುಮಾರು 200 ಬ್ರೆಜಿಲ್ ಅರ್ಥಶಾಸ್ತ್ರಜ್ಞರು ಲಸಿಕೆ ಪ್ರಕ್ರಿಯೆ ಚುರುಕುಗೊಳಿಸುವಂತೆ ಹಾಗೂ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯಲು ಕಠಿಣ ನಿರ್ಬಂಧಗಳನ್ನು ಹೇರುವಂತೆ ಬ್ರೆಜಿಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಕೊರೊನಾ ಮೃತರ ಸಂಖ್ಯೆ 1.60 ಲಕ್ಷಕ್ಕೇರಿಕೆ.. 4.84 ಕೋಟಿ ಮಂದಿಗೆ ಲಸಿಕೆ
ವೈರಸ್ಗಿಂತಲೂ ಲಾಕ್‌ಡೌನ್‌ಗಳು ಮತ್ತು ನಿರ್ಬಂಧಗಳು ಜನರಿಗೆ ಹೆಚ್ಚಿನ ತೊಂದರೆಗಳನ್ನು ಉಂಟುಮಾಡುತ್ತವೆ ಎಂಬ ಬ್ರೆಜಿಲ್ನ ಅಧ್ಯಕ್ಷ ಜೈರ್ ಬೋಲ್ಸೊನಾರೊ ಅವರ ಪ್ರತಿಪಾದನೆಯನ್ನು ತಳ್ಳಿಹಾಕಿರುವ ಅರ್ಥಶಾಸ್ತ್ರಜ್ಞರು, ಲ್ಯಾಟಿನ್ ಅಮೆರಿಕದ ಅತಿದೊಡ್ಡ ರಾಷ್ಟ್ರದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ವಿನಾಶವಾಗುವುದನ್ನು ತಪ್ಪಿಸುವಂತೆ ಕರೆ ನೀಡಿದ್ದಾರೆ.
ಬ್ರೆಜಿಲ್ನಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 49,293 ಸೋಂಕಿತರು ಪತ್ತೆಯಾಗಿದ್ದು, 1,383 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲೀಗ ಸೋಂಕಿತರ ಸಂಖ್ಯೆ 1,20,47,526ಕ್ಕೆ ಹಾಗೂ ಸಾವಿನ ಸಂಖ್ಯೆ 2,95,425ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆಯಲ್ಲಿ ಬ್ರೆಜಿಲ್ ಮೊದಲಿನಿಂದಲೂ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿ ಮುಂದುವರೆದಿದೆ.