ರಿಯೋ ಡಿ ಜನೈರೊ: ಬ್ರೆಜಿಲ್ ಕೊರೊನಾ ಸೋಂಕಿನ ಹೋರಾಟದಲ್ಲಿ ಭೀಕರ ಮೈಲಿಗಲ್ಲು ತಲುಪಿದ್ದು, ಕೋವಿಡ್-19 ನಿಂದ ಮೃತಪಟ್ಟವರ ಸಂಖ್ಯೆ 1 ಲಕ್ಷ ದಾಟಿದೆ.
ಮೊದಲ ಕೋವಿಡ್ ವರದಿಯಾದ ಐದು ತಿಂಗಳ ನಂತರ ದೇಶದಲ್ಲಿ ಸಾವಿನ ಸಂಖ್ಯೆ ಲಕ್ಷದ ಗಡಿದಾಟಿದೆ. ಸೋಂಕು ನಿಯಂತ್ರಣವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.
ಮೇ ಅಂತ್ಯದಿಂದ ಸಾಂಕ್ರಾಮಿಕ ರೋಗಕ್ಕೆ ನಿತ್ಯ ಸರಾಸರಿ 1,000ಕ್ಕೂ ಹೆಚ್ಚು ಸೋಂಕಿತರು ಸಾವನ್ನಪ್ಪಿದ್ದು ವರದಿ ಆಗುತ್ತಿದೆ. ಶುಕ್ರವಾರ ರಾತ್ರಿಯ ವೇಳೆಗೆ 99,572 ಜನರು ಮೃತಪಟ್ಟಿದ್ದ ವರದಿ ಆಗಿತ್ತು. ಶನಿವಾರ ಲಕ್ಷದ ಗಡಿ ತಲುಪಿದೆ.
ದೇಶದಲ್ಲಿ ಒಟ್ಟು 29,62,442 ಸೋಂಕಿತರು ಕಂಡುಬಂದಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಸಾವು ಮತ್ತು ಸೋಂಕಿನ ಸಂಖ್ಯೆ ಅಮೆರಿಕದ ಬಳಿಕದ ಎರಡನೆ ಸ್ಥಾನದಲ್ಲಿದೆ. ಸೋಂಕಿತರ ಪರೀಕ್ಷೆಗಳ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಕೊರೊನಾ ಕೇಸ್ಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ.