ಲಾಸ್ ಏಂಜಲೀಸ್( ಅಮೆರಿಕ) :ನವೆಂಬರ್ನಲ್ಲಿ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಎಲ್ಲ ರಾಜ್ಯಗಳಲ್ಲಿ ಚುನಾವಣೆ ಮುಂದುವರೆದಿದೆ. ಈ ಚುನಾವಣೆಯಲ್ಲಿ ಅಭ್ಯರ್ಥಿ ಮೈಕ್ ಬ್ಲೂಮ್‌ಬರ್ಗ್ ಅವರಿಗೆ ಉತ್ತಮ ಫಲಿತಾಂಶ ಸಿಕ್ಕಿಲ್ಲ. ಹೀಗಾಗಿ ಅವರು ಚುನಾವಣೆಗೆ ನಿಲ್ಲುವುದು ಅನುಮಾನವಾಗಿದೆ.
ಡೆಮಾಕ್ರಟಿಕ್ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮೈಕ್ ಬ್ಲೂಮ್‌ಬರ್ಗ್ ಅಖಾಡಕ್ಕಿಳಿದಿದ್ದು, ಪ್ರಾಥಮಿಕ ಚುನಾವಣೆ ಪ್ರಚಾರಕ್ಕಾಗಿ ಸುಮಾರು ಅರ್ಧ ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಿದ್ದಾರೆ. ಆದ್ರೆ ನಿನ್ನೆ ನಡೆದ ಪ್ರೈಮರಿ ಚುನಾವಣೆಯಲ್ಲಿ ನಿರಾಶಾದಾಯಕ ಫಲಿತಾಂಶ ಬಂದಿದೆ.
ಹೀಗಾಗಿ ಬಿಲಿಯನೇರ್ ಉದ್ಯಮಿ ಮತ್ತು ಮಾಜಿ ನ್ಯೂಯಾರ್ಕ್ ಮೇಯರ್ ಬ್ಲೂಮ್‌ಬರ್ಗ್ ಅವರು ನಿರಾಸೆಗೊಳಗಾಗಿದ್ದಾರೆ. ವರ್ಜೀನಿಯಾ, ನಾರ್ತ್ ಕೆರೊಲಿನಾ ರಾಜ್ಯಗಳಲ್ಲಿ ಮಿಲಿಯನ್ಗಟ್ಟಲೇ ಹಣವನ್ನು ಖರ್ಚು ಮಾಡಿದ್ದಾರೆ.
ವಿಶ್ವದ ಒಂಬತ್ತನೇ ಶ್ರೀಮಂತ ವ್ಯಕ್ತಿ ಬ್ಲೂಮ್‌ಬರ್ಗ್ 61 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದ ಆಸ್ತಿ ಹೊಂದಿದ್ದಾರೆ. ಬ್ಲೂಮ್‌ಬರ್ಗ್ ಪ್ರಾಥಮಿಕ ಚುನಾವಣೆ ಗೆಲ್ಲಲು ಟಿವಿ ಜಾಹೀರಾತುಗಳಿಗಾಗಿ ಮೂರು ರಾಜ್ಯಗಳಲ್ಲಿ ಕನಿಷ್ಠ 57 ಮಿಲಿಯನ್ ಡಾಲರ್‌ಗಳನ್ನು ಖರ್ಚು ಮಾಡಿದ್ದರು.
ಡೆಮಾಕ್ರಟಿಕ್ ಮತ್ತೊಬ್ಬ ಅಭ್ಯರ್ಥಿಯಾದ ಬರ್ನಿ ಸ್ಯಾಂಡರ್ಸ್ ಕ್ಯಾಲಿಫೋರ್ನಿಯಾದಲ್ಲಿ ಗೆಲುವು ಸಾಧಿಸಿದ್ದಾರೆ. ಮಂಗಳವಾರ ಅಮೆರಿಕದ 14 ರಾಜ್ಯಗಳಲ್ಲಿ ಚುನಾವಣೆ ನಡೆದಿತ್ತು. ಈ ಚುನಾವಣೆಗೆ ಬ್ಲೂಮ್‌ಬರ್ಗ್ ಹಿಂದೆಂದೂ ಯಾರು ವ್ಯಯ ಮಾಡದಷ್ಟು ಹಣವನ್ನು ಪ್ರಚಾರಕ್ಕೆ ಬಳಸಿಕೊಂಡಿದ್ದರು. ಟಿವಿ ವಾಹಿನಿಗಳ ಪ್ರಕಾರ, ಜಾಹೀರಾತಿಗಾಗಿ ಕೇವಲ 180 ಮಿಲಿಯನ್ ಡಾಲರ್‌ನಷ್ಟು ಹಣ ಖರ್ಚು ಮಾಡಿದ್ದಾರೆ ಎನ್ನಲಾಗ್ತಿದೆ.