ಕೆನೋಶಾ(ಅಮೆರಿಕ): ಇಲ್ಲಿನ ವಿಸ್ಕಾನ್ಸಿನ್ ಎಂಬ ರಾಜ್ಯದಲ್ಲಿ ಆಫ್ರಿಕನ್ ಅಮೆರಿಕನ್ ವ್ಯಕ್ತಿಯಾದ ಜಾಕೋಬ್ ಬ್ಲೇಕ್ ಎಂಬಾತನ ಮೇಲೆ ಪೊಲೀಸರು ವಿನಾಕಾರಣ ಗುಂಡಿನ ದಾಳಿ ನಡೆಸಿದ್ದು, ಬ್ಲೇಕ್ ಜೀವನ ಪರ್ಯಂತ ಎದ್ದು ನಡೆಯಲು ಸಾಧ್ಯವಿಲ್ಲ. ಒಂದು ವೇಳೆ ನಡೆಯಲು ಸಾಧ್ಯವಾದರೆ ಅದು ಪವಾಡವೇ ಸರಿ ಎಂದು ಬ್ಲೇಕ್ ಕುಟುಂಬದ ವಕೀಲ ಮಂಗಳವಾರ ಮಾಧ್ಯಮಗಳಿಗೆ ಹೇಳಿದ್ದಾರೆ.
ಕೆನೋಶಾ ನಗರದಲ್ಲಿ ಭಾನುವಾರ ಜಾಕೋಬ್ ಬ್ಲೇಕ್ ಎಂಬಾತನ ಮೇಲೆ ನಡೆದ ಗುಂಡಿನ ದಾಳಿಯ ವಿಡಿಯೋ ಸೆರೆಹಿಡಿಯಲಾಗಿದ್ದು, ಕೆನೋಶಾ ಪೊಲೀಸರು ಆತನನ್ನು ಸುತ್ತುವರಿದು ಕಾರಿನ ಬಳಿ ಕರೆತಂದು ಏಳು ಬಾರಿ ಆತನ ಬೆನ್ನಿಗೆ ಗುಂಡು ಹಾರಿಸಿರುವುದು ವಿಡಿಯೋದಲ್ಲಿ ಗೋಚರವಾಗಿದೆ. ಪೊಲೀಸರ ಈ ಅಮಾನವೀಯ ಕೃತ್ಯ ಸಹಿಸಲು ಅಸಾಧ್ಯ, ಬ್ಲೇಕ್ ಮೇಲೆ ಗುಂಡು ಹಾರಿಸಿದ ಅಧಿಕಾರಿಯನ್ನು ಈ ಕೂಡಲೇ ಬಂಧಿಸಬೇಕು ಎಂದು ಬ್ಲೇಕ್ ಪರ ವಕೀಲರು ಹಾಗೂ ಆತನ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಬ್ಲೇಕ್ ಮೇಲೆ ನಡೆದ ಗುಂಡಿನ ದಾಳಿ ನಂತರ ವಿಸ್ಕಾನ್ಸಿನ್ ಸೇರಿದಂತೆ ಅಮೆರಿಕದ ಹಲವಾರು ನಗರಗಳಲ್ಲಿ ಜನಾಂಗೀಯ ಅನ್ಯಾಯದ ಬಗ್ಗೆ ಪ್ರತಿಭಟನೆಗಳು ನಡೆದಿದ್ದು, ಅವುಗಳಲ್ಲಿ ಕೆಲವು ಅಶಾಂತಿಗೆ ಕಾರಣವಾಗಿವೆ. ಮಿನ್ನಿಯಾ ಪೊಲೀಸರ ಕೈಯಲ್ಲಿ ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ ಕೇವಲ ಮೂರು ತಿಂಗಳ ಬಳಿಕ ಈ ದುರ್ಘಟನೆ ಸಂಭವಿಸಿದ್ದು, ಕಪ್ಪು ವರ್ಣೀಯರ ಮೇಲಾಗುತ್ತಿರುವ ಶೋಷಣೆ ವಿರುದ್ದ ಅಮೆರಿಕನ್ನರು ತಿರುಗಿ ಬಿದ್ದಿದ್ದಾರೆ.
ಪೊಲೀಸರು ನನ್ನ ಮಗನ ಮೇಲೆ ಒಂದಲ್ಲ ಎರಡಲ್ಲ, ಏಳು ಬಾರಿ ಗುಂಡು ಹಾರಿಸಿದ್ದಾರೆ. ಮನುಷ್ಯತ್ವ ಉಳ್ಳವರು ಇಂತಹ ಕೃತ್ಯ ಎಸಗಲು ಸಾಧ್ಯವಿಲ್ಲ. ಗುಂಡಿನ ದಾಳಿಯಿಂದಾಗಿ ನನ್ನ ಮಗ ಪಾರ್ಶವಾಯುಗೆ ಒಳಗಾಗಿದ್ದಾನೆ. ಆತನಿಗೆ ಜೀವನ ಪರ್ಯಂತ ಸ್ವಾವಲಂಬಿಯಾಗಿ ನಡೆಯಲು ಕಷ್ಟ ಸಾಧ್ಯ ಎನ್ನಲಾಗಿದೆ. ಬ್ಲೇಕ್ನ ಬೆನ್ನಿಗೆ ಹೊಕ್ಕಿರುವ ಗುಂಡುಗಳು ಆತನ ಬೆನ್ನು ಹುರಿಯನ್ನು ತುಂಡರಿಸಿದೆ ಹಾಗೂ ಇತರ ಅಂಗಗಳಿಗೆ ತೀವ್ರ ಹಾನಿಯಾಗಿದೆ ಎಂದು ಬ್ಲೇಕ್ ತಂದೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.