ವಾಷಿಂಗ್ಟನ್: ಕಳೆದ 50 ವರ್ಷಗಳಿಂದ ಅಮೆರಿಕ ರಾಜಕೀಯದಲ್ಲ ಸಕ್ರಿಯರಾಗಿದ್ದ 78 ವರ್ಷದ ಜೋ ಬೈಡನ್ ಈಗ ಅಮೆರಿಕದ 46ನೇ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಇವರ ಪೂರ್ಣ ಹೆಸರು ಜೋಸೆಫ್ ರಾಬಿನೆಟ್ ಬೈಡನ್. 1942, ನವೆಂಬರ್ 22 ರಂದು ಪೆನ್ಸಿಲ್ವೇನಿಯಾದ ಸ್ಕ್ರಾಂಟನ್ನಲ್ಲಿ ಜನಿಸಿದರು.
ಇನ್ನೇನು 78ನೇ ವರ್ಷಕ್ಕೆ ಕಾಲಿಡಲಿರುವ ಬೈಡನ್ ಅವರು ಜನವರಿಯಲ್ಲಿ ಟ್ರಂಪ್ ಅಧಿಕಾರಾವಧಿ ಮುಗಿದ ಬಳಿಕ ಅಧ್ಯಕ್ಷ ಗಾದಿಗೆ ಏರಲಿದ್ದಾರೆ. ಆ ಮೂಲಕ ಅಮೆರಿಕ ಅತ್ಯಂತ ಹಿರಿಯ ಅಧ್ಯಕ್ಷರೆಂಬ ಖ್ಯಾತಿ ಪಡೆಯಲಿದ್ದಾರೆ.
ಬಾಲ್ಯದಲ್ಲಿ ಬೈಡನ್ ಶೈಕ್ಷಣಿಕವಾಗಿ ಅಷ್ಟಾಗಿ ಮುಂದಿರದಿದ್ದರೂ ಬೇಸ್ ಬಾಲ್, ಫುಟ್ಬಾಲ್ ತಂಡದ ನಾಯಕರಾಗಿ ಗುರುತಿಸಿಕೊಂಡಿದ್ದರು. 1965 ರಲ್ಲಿ ಡೆಲಾವೇರ್ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಪದವಿ, 1968ರಲ್ಲಿ ಸೈರಾಕಸ್ ವಿವಿಯಲ್ಲಿ ಕಾನೂನು ಪದವಿ ಪಡೆದಿದ್ದಾರೆ.
1966ರಲ್ಲಿ ಮೊದಲ ಮದುವೆ:
1966, ಆಗಸ್ಟ್ 27 ರಂದು ನಿಲಿಯಾ ಹಂಟರ್ ಎಂಬುವವರನ್ನು ಬೈಡನ್ ಮದುವೆಯಾದರು. ಇವರ ಮೂರು ಮಕ್ಕಳಲ್ಲಿ ಓರ್ವ ಮೃತಪಟ್ಟಿದ್ದಾರೆ. ಪತ್ನಿ ನಿಲಿಯಾ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಆಘಾತ: ಬೈಡನ್ ಮೊದಲ ಪತ್ನಿ ಮತ್ತು ಮಗಳು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಕಿರಿಯ ಸೆನೆಟರ್:
1969 ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ ಬೈಡನ್, 1970 ರಲ್ಲಿ ನ್ಯೂಕ್ಯಾಸಲ್ ಕೌಂಟಿ ಕೌನ್ಸಿಲ್ಗೆ ಆಯ್ಕೆಯಾದರು. 1972 ರಲ್ಲಿ ಡೆಲಾವೇರ್ನಿಂದ 30ನೇ ವಯಸ್ಸಿಗೆ ಯುಎಸ್ ಸೆನೆಟ್ಗೆ ಚುನಾಯಿತರಾಗಿ, ಅಮೆರಿಕಾ ಇತಿಹಾಸದಲ್ಲಿ ಆರನೇ ಕಿರಿಯ ಸೆನೆಟರ್ ಎನಿಸಿಕೊಂಡರು. ಆ ಬಳಿಕ ಬೈಡನ್ ಆರು ಬಾರಿ ಸೆನೆಟ್ಗೆ ಆಯ್ಕೆಯಾದರು.
ಬೈಡನ್ ಉಪಾಧ್ಯಕ್ಷ/ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧೆ... ಮೂರು ಬಾರಿ ಸ್ಪರ್ಧೆ:
1988ರಲ್ಲೇ ಬೈಡನ್ ಅವರು ಅಧ್ಯಕ್ಷೀಯ ಚುನಾವಣೆಗೆ ಇಳಿದಿದ್ದರು. ಆದ್ರೆ ವಿವಾದಾತ್ಮಕ ಹೇಳಿಕೆಗಳಿಂದ ಕಣದಿಂದ ಸರಿದಿದ್ದರು. ಹಾಗೆಯೇ 2008ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಜ್ಜಾಗಿದ್ದರು, ಆದ್ರೆ ಬೆಂಬಲ ಕೊರತೆಯಿಂದ ಹಿಂದೆ ಉಳಿದಿದ್ದರು. 2020ರಲ್ಲಿ ಮತ್ತೆ ಡೆಮಾಕ್ರಟಿಕ್ ಪಕ್ಷದಿಂದ ಕಣಕ್ಕೆ ಇಳಿದು ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಬೈಡನ್ ತಮ್ಮ ಸಹೋದರ ಎಂದಿದ್ದ ಬರಾಕ್ ಒಬಾಮಾ... 2009-17ರವರೆಗೆ ಉಪಾಧ್ಯಕ್ಷ:
ಬರಾಕ್ ಒಬಾಮಾ ಅವರು ಬೈಡನ್ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ನಾಮಿನಿ ಮಾಡಿದ್ದರು. ಪರಿಣಾಮ ಒಬಾಮಾ-ಬೈಡನ್ ಗೆದ್ದ ಬಳಿಕ 2009ರಲ್ಲಿ ಉಪಾಧ್ಯಕ್ಷರಾದರು. 2012ರಲ್ಲಿ ಇವರು ಮರು ಆಯ್ಕೆ ಆದರು. ಅಂದ್ರೆ ಬೈಡನ್ 2009 ರಿಂದ 2017ರ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ-2020ಯಲ್ಲಿ ಗೆಲುವು:
ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿದ್ದ ಬೈಡನ್, ಟ್ರಂಪ್ ಎದುರು ಗೆದ್ದು ಅಮೆರಿಕದ 46ನೇ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.