ವಾಷಿಂಗ್ಟನ್(ಅಮೆರಿಕ):ಸೆಪ್ಟೆಂಬರ್ 24ರಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕ್ವಾಡ್ ನಾಯಕರ ಸಭೆ ಆಯೋಜಿಸಿದ್ದಾರೆ ಎಂದು ಶ್ವೇತಭವನ ಮಾಹಿತಿ ನೀಡಿದೆ. ಈ ಸಭೆಯಲ್ಲಿ ಕ್ವಾಡ್ ಸದಸ್ಯ ರಾಷ್ಟ್ರಗಳಾದ ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕದ ಮುಖ್ಯಸ್ಥರು ಭಾಗಿಯಾಗಲಿದ್ದಾರೆ.
ಅಧ್ಯಕ್ಷ ಬೈಡನ್ ಅವರು ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಅವರನ್ನು ಸ್ವಾಗತಿಸಲು ಎದುರು ನೋಡುತ್ತಿದ್ದಾರೆ ಎಂದು ಶ್ವೇತಭವನ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಈ ಸಭೆಯಲ್ಲಿ ಕೋವಿಡ್ ವಿರುದ್ಧ ಹೋರಾಟ, ಹವಾಮಾನ ಬಿಕ್ಕಟ್ಟು, ತಂತ್ರಜ್ಞಾನ, ಸೈಬರ್‌ಸ್ಪೇಸ್ ಪಾಲುದಾರಿಕೆ ಹಾಗೂ ವಿಶೇಷವಾಗಿ ಇಂಡೋ - ಪೆಸಿಫಿಕ್ ಪ್ರದೇಶದ ಕುರಿತು ಈ ನಾಲ್ಕೂ ದೇಶಗಳ ನಾಯಕರು ಚರ್ಚೆ ನಡೆಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 24ಕ್ಕೆ ಅಮೆರಿಕಕ್ಕೆ ತೆರಳಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ. ಈಗಾಗಲೇ ಜಪಾನ್ನ ಪ್ರಧಾನಿ ಯೋಶಿಹಿಡೆ ಸುಗಾ ಕ್ವಾಡ್ ಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ ಎಂದು ಜಪಾನ್ ಮಾಧ್ಯಮಗಳು ವರದಿ ಮಾಡಿವೆ.