ವಾಷಿಂಗ್ಟನ್:ಚೀನಾ - ಅಮೆರಿಕ ನಡುವೆ ಮುಸುಕಿನ ಗುದ್ದಾಟವಿದ್ದರೂ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ಗೆ ದೂರವಾಣಿ ಕರೆ ಮಾಡಿ ಸತತ 90 ನಿಮಿಷಗಳ ಕಾಲ ಮಾತನಾಡಿದ್ದಾರೆ.
ಸೈಬರ್ ಸೆಕ್ಯುರಿಟಿ ಉಲ್ಲಂಘನೆ, ಚೀನಾ ಲ್ಯಾಬ್ನಲ್ಲಿ ಕೊರೊನಾ ವೈರಸ್ ಸೃಷ್ಟಿ, ವ್ಯಾಪಾರ ಪದ್ಧತಿ ವಿಚಾರವಾಗಿ ಚೀನಾವನ್ನು ದೂಷಿಸುತ್ತಾ ಬಂದಿದ್ದ ಅಮೆರಿಕ ಇದೀಗ ಡ್ರ್ಯಾಗನ್ ರಾಷ್ಟ್ರದ ಜೊತೆ ಸುದೀರ್ಘವಾಗಿ ಮಾತನಾಡಿರುವುದು ಎಲ್ಲರ ಗಮನ ಸೆಳೆದಿದೆ.
ಅಷ್ಟೇ ಅಲ್ಲ ತಾಲಿಬಾನ್ ವಿರೋಧಿಸುವ ಅಮೆರಿಕವು ಉಗ್ರ ಸಂಘಟನೆಗೆ ಚೀನಾ ಬೆಂಬಲ ಸೂಚಿಸುತ್ತಿರುವ ವೇಳೆ ಈ ಮಾತುಕತೆ ನಡೆಸಿರುವುದು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಶತ್ರುಗಳ ಶತ್ರು ಮಿತ್ರ.. ತಾಲಿಬಾನ್ಗೆ 228 ಕೋಟಿ ರೂ. ನೆರವು ಘೋಷಿಸಿದ ಚೀನಾ
ಉಭಯ ನಾಯಕರ ಉನ್ನತ ಸಲಹೆಗಾರರ ನಡುವಿನ ಉನ್ನತ ಮಟ್ಟದ ಸಭೆ ಫಲಪ್ರದವಾಗದ ಬೆನ್ನಲ್ಲೇ ಜಿನ್‌ಪಿಂಗ್ ಬೈಡನ್ಗೆ ಕರೆ ಮಾಡಿದ್ದಾರೆ. ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಚೀನಾ ಅಧ್ಯಕ್ಷರೊಂದಿಗೆ ಬೈಡನ್ ನಡೆಸಿದ ಎರಡನೇ ಮಾತುಕತೆ ಇದಾಗಿದೆ.
ಈ ಬಾರಿಯ ಮಾತುಕತೆಯಲ್ಲಿ ಹಳೆಯ ಖ್ಯಾತೆಗಳನ್ನು ಬೈಡನ್ ತೆಗೆದಿಲ್ಲ. ಬದಲಾಗಿ ವ್ಯಾಪಕವಾದ ಕಾರ್ಯತಂತ್ರ, ಹವಾಮಾನ ವೈಪರೀತ್ಯ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಚೀನಾ ಸರ್ಕಾರಿ ಮಾಧ್ಯಮ ತಿಳಿಸಿದೆ. ಆದರೆ ಯಾವುದೇ ವಿವರಗಳನ್ನು ನೀಡಿಲ್ಲ.
ಆದರೆ, ಉಭಯ ರಾಷ್ಟ್ರಗಳ ನಡುವಿನ 'ಸ್ಪರ್ಧೆ'ಯು 'ಸಂಘರ್ಷ'ಕ್ಕೆ ದಾರಿ ಮಾಡಕೊಡಬಾರದು. ಹೀಗೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಪ್ರಪಂಚದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯಲ್ಲಿ ಅಮೆರಿಕ ಆಸಕ್ತಿ ಹೊಂದಿದೆ ಎಂಬುದನ್ನು ಬೈಡನ್ ಜಿನ್ಪಿಂಗ್ಗೆ ಹೇಳಿದ್ದಾರೆ ಎಂದು ಶ್ವೇತಭವನ ತನ್ನ ಹೇಳಿಕೆಯಲ್ಲಿ ತಿಳಿಸಿದೆ.