ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆಯನ್ನು ಆಗಸ್ಟ್ 31ಕ್ಕೆ ಮುಕ್ತಾಯಗೊಳಿಸಲು ಯೋಚಿಸುತ್ತಿದ್ದೇವೆ. ಅಗತ್ಯಬಿದ್ದರೆ ಈ ಗಡುವನ್ನು ವಿಸ್ತರಿಸುವುದಾಗಿ ಜೋ ಬೈಡನ್ ಹೇಳಿದರು.
ಶ್ವೇತಭವನದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿರುವ ಅವರು, ಈ ಅವಧಿಯನ್ನು ನಾವು ವಿಸ್ತರಿಸಿಕೊಳ್ಳಬೇಕಿಲ್ಲ. ಅಫ್ಘಾನ್‌ನಲ್ಲಿರುವ ಅಸ್ಥಿರ ಪರಿಸ್ಥಿತಿ ಹಾಗೂ ಸ್ಥಳಾಂತರ ಮಾಡಬೇಕಿರುವ ಜನರ ಸಂಖ್ಯೆ ಏರುತ್ತಲೇ ಇರುವುದರಿಂದ ಹೆಚ್ಚಿನ ತೊಂದರೆ ಆಗುತ್ತಿದೆ ಎಂದರು.
ನಾವು ಮುಂದೆ ಏನು ಮಾಡಬಹುದು ಎಂಬುದರ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಕಾಬೂಲ್ ವಿಮಾನ ನಿಲ್ದಾಣದ ಮೇಲೆ ತಾಲಿಬಾನಿಗಳು ಸಂಭವನೀಯ ದಾಳಿ ನಡೆಸುವ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. ತಾಲಿಬಾನ್‌ಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಬಳಿಕ ಸುಮಾರು 28,000 ಜನರನ್ನು ಅಫ್ಘಾನ್‌ನಿಂದ ಹೊರ ಕಳುಹಿಸಲಾಗಿದೆ ಎಂದು ಬೈಡನ್ ತಿಳಿಸಿದರು.