ವಾಷಿಂಗ್ಟನ್: ನವೆಂಬರ್ 3 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಚುನಾಯಿತನಾದರೆ ಎಲ್ಲಾ ಅಮೆರಿಕನ್ನರಿಗೆ ಕೋವಿಡ್ -19 ಲಸಿಕೆಗಳನ್ನು ಉಚಿತವಾಗಿ ನೀಡುವುದಾಗಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಹೇಳಿದ್ದಾರೆ.
ಡೆಲವೇರ್ನ ವಿಲ್ಮಿಂಗ್ಟನ್‌ನಲ್ಲಿ ಕೊರೊನಾ ವೈರಸ್ ನಿಯಂತ್ರಣದ ಕುರಿತು ಪ್ರತಿಕ್ರಿಯಿಸಿದ ಅವರು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದರು. ಟ್ರಂಪ್ ಕೋವಿಡ್ ವೈರಸ್ ಅನ್ನು ನಿರ್ಲಕ್ಷಿಸುತ್ತಿದ್ದು, ಸೋಂಕಿನ ವಿರುದ್ಧ ಹೋರಾಡುವುದನ್ನು ಬಿಟ್ಟುಬಿಟ್ಟಿದ್ದಾರೆ ಎಂದು ಟೀಕಿಸಿದರು.
ಕೋವಿಡ್ -19 ನಿಂದಾಗಿ ಅನೇಕರು ಸಂಕಷ್ಟ ಎದುರಿಸುತ್ತಿದ್ದು, ಆರ್ಥಿಕವಾಗಿ ನಷ್ಟ ಉಂಟುಮಾಡಿದೆ. ಸೋಂಕು ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣಗಳು ಸಹ ಕಂಡುಬರುತ್ತಿಲ್ಲ. ಈಗಾಗಲೇ ದೇಶಾದ್ಯಂತ 2,23,000 ಕ್ಕೂ ಹೆಚ್ಚು ಜನರನ್ನು ವೈರಸ್ ಬಲಿ ಪಡೆದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇನ್ನು ಕೊರೊನಾ ವೈರಸ್ ಕುರಿತಂತೆ ದೇಶದ ಪ್ರಮುಖ ವಿಜ್ಞಾನಿಗಳು ಹಾಗೂ ವೈದ್ಯರ ತಂಡವನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲಾ ರಾಜ್ಯಗಳ ಗವರ್ನರ್ ಜೊತೆ ಚರ್ಚೆ ನಡೆಸಿ, ದೈನಂದಿನ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸುವ ಜೊತೆಗೆ ಜನರಿಗೆ ಸೂಕ್ತ ಮಾಹಿತಿ ಹಾಗೂ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಬೈಡನ್ ಆಶ್ವಾಸನೆ ನೀಡಿದ್ದಾರೆ.