ವಾಷಿಂಗ್ಟನ್:ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಆಡಳಿತದಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಇಬ್ಬರು ಭಾರತೀಯ - ಅಮೆರಿಕನ್ ಮಹಿಳೆಯರಾದ ರಾಧಿಕಾ ಫಾಕ್ಸ್ ಮತ್ತು ಮೀರಾ ಜೋಶಿ ಅವರನ್ನು ಪ್ರಮುಖ ಏಜೆನ್ಸಿಗಳ ಪೈಕಿ ಹವಾಮಾನ ಮತ್ತು ಸಾರಿಗೆ ವಿಚಾರ ಮುನ್ನಡೆಸಲು 10 ಸದಸ್ಯರ ತಂಡದ ಭಾಗವಾಗಿ ಹೆಸರಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಶ್ವೇತಭವನದ ಪ್ರಕಟಣೆಯ ಪ್ರಕಾರ, ರಾಧಿಕಾ ಅವರು ಜಲ, ಪರಿಸರ ಸಂರಕ್ಷಣಾ ಏಜೆನ್ಸಿಯ ಸಹಾಯಕ ನಿರ್ವಾಹಕರಾಗಲಿದ್ದಾರೆ. ಜೋಶಿ ಅವರನ್ನು ಸಾರಿಗೆ ಇಲಾಖೆಯ ಫೆಡರಲ್ ಮೋಟಾರ್ ಕ್ಯಾರಿಯರ್ ಸೇಫ್ಟಿ ಆಡಳಿತ ನಿರ್ವಾಹಕರಾಗಿ ನೇಮಕ ಮಾಡಲಾಗಿದೆ ಎಂದು ಅಮೆರಿಕದ ಬಜಾರ್ ಮಾಧ್ಯಮ ವರದಿ ಮಾಡಿದೆ.
ಜನವರಿ 20ರಂದು ಪರಿಸರ ಸಂರಕ್ಷಣಾ ಸಂಸ್ಥೆಯಲ್ಲಿ (ಇಪಿಎ) ಜಲ ಪ್ರಧಾನ ಉಪ ಸಹಾಯಕ ಆಡಳಿತಾಧಿಕಾರಿಯಾಗಿ ನೇಮಕಗೊಂಡ ರಾಧಿಕಾ, ಪ್ರಸ್ತುತ ವಾಟರ್ ಕಾರ್ಯಕಾರಿ ಸಹಾಯಕ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.