ವಾಷಿಂಗ್ಟನ್:ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಜರ್ಮನ್ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ದ್ವಿಪಕ್ಷೀಯ ಸಭೆಯಲ್ಲಿ ಚೀನಾದ ನಡವಳಿಕೆಗಳಿಂದಾಗಿ ಉಂಟಾಗಿರುವ ಸವಾಲುಗಳನ್ನು ಚರ್ಚಿಸಿದ್ದಾರೆ.
ಈ ಕುರಿತು ಜಂಟಿ ಸುದ್ದಿಗೋಷ್ಠಿ ನಡೆಸಿರುವ ಬೈಡನ್ ಮತ್ತು ಮಾರ್ಕೆಲ್, ನಾವು ಚೀನಾದ ಬಗ್ಗೆ ಚರ್ಚಿಸಿದ್ದು, ಅದು ಅನೇಕ ಕ್ಷೇತ್ರಗಳಲ್ಲಿ ನಮ್ಮ ಪ್ರತಿಸ್ಪರ್ಧಿ ಎಂಬ ಸಾಮಾನ್ಯ ತಿಳಿವಳಿಕೆಯಿದೆ ಎಂದರು. ಆರ್ಥಿಕ ಕ್ಷೇತ್ರ, ಹವಾಮಾನ ಸಂರಕ್ಷಣೆ, ಮಿಲಿಟರಿ ವಲಯ ಮತ್ತು ಭದ್ರತೆ ಸಹಕಾರ ಸೇರಿ ಹಲವು ಅಂಶಗಳ ಬಗ್ಗೆ ಮತ್ತು ಚೀನಾದೊಂದಿಗಿನ ಸ್ಪರ್ಧೆಯ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ.
ಚೀನಾದೊಂದಿಗಿನ ವ್ಯಾಪಾರವು ನಮಗೆ ಒಂದು ರೀತಿಯ ಆಟದ ಮೈದಾನವಿದ್ದಂತೆ. ನಾವೆಲ್ಲರೂ ಒಂದೇ ನಿಯಮಗಳನ್ನು ಅನುಸರಿಸಿ ಆಡುತ್ತೇವೆ. ಎಂದರು. ಇದೇ ವೇಳೆ, ಇಯು - ಚೀನಾ ನಡುವಿನ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿರುವ ಮಾರ್ಕೆಲ್, ಅವರು ಐಎಲ್ಒನ ಪ್ರಮುಖ ಕಾರ್ಮಿಕ ನೀತಿಗಳನ್ನು ಅನುಸರಿಸುತ್ತಿದ್ದಾರೆ ಎಂದರು.
ಚಿಪ್ಸ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಅಮೆರಿಕ ಮತ್ತು ಜರ್ಮನಿ ಸಹಕರಿಸುತ್ತವೆ. ಡಿಜಿಟಲೀಕರಣದ ಸಮಯದಲ್ಲಿ ಒಟ್ಟಿಗೆ ವ್ಯಾಪಾರ ಮಾಡಲು ಬಯಸುತ್ತೇವೆ. ನಮ್ಮ ಕಾರ್ಯಸೂಚಿಗಳಲ್ಲಿ ಭದ್ರತಾ ಸಮಸ್ಯೆಗಳಿದ್ದು, ಬಗೆಹರಿಸಿಕೊಳ್ಳಬೇಕಿದೆ ಎಂದು ಮಾರ್ಕೆಲ್ ಹೇಳಿದ್ದಾರೆ.
ಚೀನಾದೊಂದಿಗಿನ ನಮ್ಮ ಸಂಬಂಧ ಮುಂದುವರಿಸಲು ನಾವು ಏನೆಲ್ಲಾ ಕ್ರಮ ಕೈಗೊಳ್ಳಬೇಕಿದೆ ಎಂಬುದರ ಕುರಿತಾಗಿಯೂ ಚರ್ಚಿಸಿದ್ದೇವೆ. ನಾವು ನಮ್ಮ ಪ್ರಯತ್ನಗಳನ್ನು ಸಮನ್ವಯಗೊಳಿಸಲು ಯೂರೋಪಿಯನ್ ಒಕ್ಕೂಟದಲ್ಲಿ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ:COVID ಬಗ್ಗೆ ತನಿಖೆ ನಡೆಸಲು 9/11 ರಂತೆ ಆಯೋಗ ರಚಿಸಿ: ಯುಎಸ್ ಸಂಸದರಿಂದ ಸ್ಪೀಕರ್ಗೆ ಪತ್ರ
ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆಯುವುದು ಅತ್ಯಗತ್ಯವಾಗಿದ್ದು, ವ್ಯಾಕ್ಸಿನ್ ಉತ್ಪಾದಿಸಲು ಕಂಪನಿಗಳನ್ನು ಪ್ರೋತ್ಸಾಹಿಸಬೇಕಿದೆ. ನಮ್ಮ ದೇಶದಲ್ಲಿ ಸಾಧ್ಯವಾದಷ್ಟು ಜನರಿಗೆ ಲಸಿಕೆ ಹಾಕಲು ಪ್ರಯತ್ನಿಸುತ್ತಿದ್ದೇವೆ. ಅದಕ್ಕಾಗಿಯೇ ಕೋವಾಕ್ಸ್ನಲ್ಲಿ ಸಾಕಷ್ಟು ಹಣ ಹೂಡಿಕೆ ಮಾಡಿದ್ದೇವೆ ಎಂದು ಜರ್ಮನ್ ಚಾನ್ಸೆಲರ್ ಮಾರ್ಕೆಲ್ ಹೇಳಿದರು.