ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೂನ್ ಅಂತ್ಯದ ವೇಳೆಗೆ 80 ಮಿಲಿಯನ್ ಡೋಸ್ ಕೋವಿಡ್ ಲಸಿಕೆಯನ್ನು ವಿಶ್ವದ ಇತರ ದೇಶಗಳಿಗೆ ತಲುಪಿಸುವ ಗುರಿ ಹೊಂದಿದ್ದರು. ಆದರೆ, ಕೆಲ ರಾಜತಾಂತ್ರಿಕತೆ ಅಡಚಣೆಗಳಿಂದ ವ್ಯಾಕ್ಸಿನೇಷನ್ ತಲುಪಿಸುವ ಗುರಿ ಕುಂಠಿತಗೊಂಡಿದೆ.
ಕೆಲ ದಿನಗಳ ಹಿಂದೆ ಸುಮಾರು 50 ದೇಶಗಳು ಕೋವಿಡ್ ಲಸಿಕೆಯ ಹೆಚ್ಚುವರಿ ಪಾಲನ್ನು ಪಡೆಯಲಿವೆ ಎಂದು ಬೈಡನ್ ಘೋಷಿಸಿದ್ದರು. ಆದರೂ, ಅಮೆರಿಕ 10 ದೇಶಗಳಿಗೆ 24 ದಶಲಕ್ಷಕ್ಕಿಂತ ಕಡಿಮೆ ಪ್ರಮಾಣದ ಡೋಸ್ ಪೂರೈಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ತಿಳಿಸಿದೆ.
ಬೈಡನ್ ಕೊಟ್ಟ ಮಾತಿಗೆ ಬದ್ಧರಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಲಸಿಕೆ ಪೂರೈಸುವುದಾಗಿ ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ. ವ್ಯಾಕ್ಸಿನ್ಗೇನು ಕೊರತೆಯಿಲ್ಲ. ಕಾನೂನು ಅವಶ್ಯಕತೆ, ಕಸ್ಟಮ್ಸ್ ಕ್ಲಿಯರೆನ್ಸ್, ಕೋಲ್ಡ್ ಸ್ಟೋರೇಜ್ ಹಾಗೂ ವಿತರಣಾ ಕಾರ್ಯಕ್ರಮಗಳ ಸಂಕೀರ್ಣ ವೆಬ್ ಪ್ರಕ್ರಿಯೆಗಳು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿವೆ. ಆದ್ದರಿಂದ ಲಸಿಕೆ ಪೂರೈಕೆ ನಿಧಾನವಾಗಿದೆ.
ಇತರ ದೇಶಗಳಿಗೆ ಲಸಿಕೆ ಪೂರೈಸಲು ಸಚಿವ ಸಂಪುಟದ ಅನುಮತಿ ಕಡ್ಡಾಯವಾಗಿರುತ್ತದೆ. ಸುರಕ್ಷತಾ ತಪಾಸಣೆ ನಡೆಸಲು ತನಿಖಾಧಿಕಾರಿಗಳು ಬೇಕಾಗುತ್ತಾರೆ. ಯಾವ ರಾಷ್ಟ್ರಗಳು ಯಾವ ಅಡೆತಡೆಗಳು ಎದುರಿಸುತ್ತಿವೆ ಅನ್ನೋದನ್ನು ಬಹಿರಂಗ ಪಡಿಸಲು ಶ್ವೇತಭವನ ನಿರಾಕರಿಸಿದೆ. ಲಸಿಕೆ ಸ್ವೀಕರಿಸುವ ದೇಶಗಳಿಗೆ ಇರುವ ಅಡೆತಡೆಗಳನ್ನು ನಿವಾರಿಸಲು ನಾವು ಕೆಲಸ ಮಾಡುತ್ತಿದ್ದೇವೆ ಎಂದೂ ತಿಳಿಸಿದೆ.
ಲಸಿಕೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಕಠಿಣ ವ್ಯವಸ್ಥಾಪನಾ ಸವಾಲು ಇರುವುದರಿಂದ ವಿತರಣೆ ಕಷ್ಟವಾಗುತ್ತಿದೆ ಎಂದು ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಹೇಳಿದ್ದಾರೆ. ಮೇ 17 ರಂದು ವಿಶ್ವದ ಹಲವು ರಾಷ್ಟ್ರಗಳಿಗೆ 80 ಮಿಲಿಯನ್ ಲಸಿಕೆ ಡೋಸ್ ಪೂರೈಸುವುದಾಗಿ ಬೈಡನ್ ಘೋಷಿಸಿದ್ದರು. ಇದು ಈವರೆಗೆ ರಷ್ಯಾ ಮತ್ತು ಚೀನಾಕ್ಕಿಂತ ಪೂರೈಸಿದ್ದಕ್ಕಿಂತ ಐದು ಪಟ್ಟು ಹೆಚ್ಚಾಗಿದೆ.