ವಾಷಿಂಗ್ಟನ್: ಯುಎಸ್ ಅಧ್ಯಕ್ಷ ಜೋ ಬೈಡನ್ ಅಮೆರಿಕನ್ನರ ಜೈವನ ಶೈಲಿ ಸುಧಾರಣೆಗೊಳಿಸುವ ಉದ್ದೇಶವನ್ನಿಟ್ಟುಕೊಂಡು ಶುಕ್ರವಾರದಂದು ಎರಡು ಕಾರ್ಯನಿರ್ವಾಹಕ ಆದೇಶಗಳನ್ನು ಘೋಷಿಸಿದ್ದಾರೆ.
ಅಮೆರಿಕದ 46ನೇ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಮತ್ತು ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಇದೇ 20 ರಂದು ಪದಗ್ರಹಣ ಮಾಡಿದ್ದು, ಮುಂಬರುವ ಉತ್ತಮ ದಿನಗಳಿಗೆ ನಾಂದಿ ಹಾಡಿದ್ದಾರೆ. ಆಡಳಿತದ ಆರಂಭದ ದಿನಗಳಲ್ಲೇ ಹಲವಾರು ಬದಲಾವಣೆಗಳನ್ನು ತರುತ್ತಿದ್ದು, ಉತ್ತಮ ದಿನಗಳಿಗೆ ಎದುರು ನೋಡುತ್ತಿದ್ದಾರೆ. ಇದೀಗ ಹೊಸ ಎರಡು ಆದೇಶಗಳನ್ನು ಘೋಷಿಸಿದ್ದು, ಜನರಿಗೆ ಇದು ಸಹಾಯವಾಗಲಿದೆ ಮತ್ತು ಅವರು ಇದನ್ನು ಒಪ್ಪುತ್ತಾರೆಂದು ನಂಬಿದ್ದಾರೆ.
ಫೆಡರಲ್ ವರ್ಕ್ಫೋರ್ಸ್ ಸಿಬ್ಬಂದಿಯ ಕನಿಷ್ಠ ವೇತನವನ್ನು ಯುಎಸ್ಡಿ 15ಕ್ಕೆ ಏರಿಸುವುದು ಮತ್ತು ಕಡಿಮೆ ಆದಾಯದ ಅಮೆರಿಕನ್ನರಿಗೆ ಆಹಾರ, ಧನ ಸಹಾಯವನ್ನು ವಿಸ್ತರಿಸುವತ್ತ ಗಮನ ಹರಿಸುವುದೇ ಈ ಆದೇಶದಲ್ಲಿ ಉಲ್ಲೇಖವಾಗಿರುವ ವಿಷಯ.
ಈ ಸುದ್ದಿಯನ್ನೂ ಓದಿ:ಜೋ ಬೈಡನ್ ಪದಗ್ರಹಣದಲ್ಲಿ ಭಾಗಿಯಾಗಿದ್ದ 200 ಭದ್ರತಾ ಸಿಬ್ಬಂದಿಗೆ ಕೊರೊನಾ!
ಈ ಕುರಿತು ಮಾತನಾಡಿರುವ ಬೈಡನ್, ನಿರುದ್ಯೋಗ ಹೆಚ್ಚುತ್ತಿದ್ದು ಸರ್ಕಾರ ಆ ಕುರಿತು ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ತಿಳಿಸಿದರು. ನಾನು ಇಡೀ ಸರ್ಕಾರವನ್ನು ನಿರ್ದೇಶಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಲಿದ್ದು, ಇದು ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಲಿದೆ ಎಂದರು. ಕೊರೊನಾ ಸಮಸ್ಯೆ, ಹಸಿವಿನ ಸಮಸ್ಯೆ, ನಿರುದ್ಯೋಗ ಎಲ್ಲವನ್ನೂ ಸರಿಪಡಿಸುವತ್ತ ಗಮನ ಹರಿಸಬೇಕಿದೆ ಎಂದು ತಿಳಿಸಿದರು.