ವಾಷಿಂಗ್ಟನ್ :ಅಮೆರಿಕದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಹಲವು ಆದೇಶಗಳನ್ನು ರದ್ದು ಮಾಡಿದ್ದ ನೂತನ ಅಧ್ಯಕ್ಷ ಜೋ ಬೈಡನ್ ಇದೀಗ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದಾರೆ.
2020ರ ಫೆಬ್ರವರಿಯಲ್ಲಿ ತಾಲಿಬಾನ್‌ನೊಂದಿಗೆ ಒಪ್ಪಂದದ ಬಗ್ಗೆ ಅಧ್ಯಕ್ಷ ಜೋ ಬೈಡನ್ ಅವರು ಪರಿಶೀಲನೆ ನಡೆಸಲಿದ್ದಾರೆ ಎಂದು ವೈಟ್‌ಹೌಸ್ ಹೇಳಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ಒಪ್ಪಂದದ ಬಗ್ಗೆ ಆಫ್ಘಾನಿಸ್ತಾನದ ನಿಯೋಗದ ಅಹ್ಮದುಲ್ಲಾ ಮೊಹಿಬಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ತಾಲಿಬಾನ್, ಉಗ್ರ ಸಂಘಟನೆಗಳೊಂದಿಗೆ ಒಪ್ಪಂದವನ್ನು ಮುರಿದುಕೊಳ್ಳುವ ಬದ್ಧತೆಯನ್ನು ಪ್ರದರ್ಶಿಸಬೇಕು. ಆಗ ಮಾತ್ರ ಆಫ್ಘಾನಿಸ್ತಾನದಲ್ಲಿ ಹಿಂಸಾಚಾರ ಕಡಿಮೆಯಾಗುತ್ತದೆ. ಜೊತೆಗೆ ಆಫ್ಘಾನ್ ಸರ್ಕಾರ ಹಾಗೂ ಇತರರೊಂದಿಗೆ ಅರ್ಥಪೂರ್ಣ ಒಪ್ಪಂದ ಮಾಡಿಕೊಳ್ಳಬಹುದು ಎಂದು ಹೇಳಿದೆ.
ಅಲ್ ಖೈದಾ ತಾಲಿಬಾನ್ ಜತೆ ಇನ್ನೂ ಸಂಬಂಧವನ್ನು ಮುಂದುವರಿಸಿದೆ ಎಂಬುದನ್ನು ಕೇಳಿದ್ದೇನೆ ಎಂದು ಅಮೆರಿಕದ ನೂತನ ವಿದೇಶಾಂಗ ಕಾರ್ಯದರ್ಶಿ ಆ್ಯಂಟೋನಿ ಬ್ಲಿನ್‌ಕೆನ್ ಕಳೆದ ಗುರುವಾರವಷ್ಟೇ ಹೇಳಿಕೆ ನೀಡಿದ್ದರು. ಆಫ್ಘಾನಿಸ್ತಾನದಲ್ಲಿ ಯುದ್ಧದಿಂದ 2,500 ಯುಎಸ್ ಸೈನಿಗಳು ಮೃತಪಟ್ಟಿದ್ದಾರೆಂಬ ಆರೋಪವಿದೆ. ಇದು ಅಮೆರಿಕದ ಇತಿಹಾಸದಲ್ಲಿ ಅತಿ ದೊಡ್ಡ ಸೈನಿಕರ ಸಾವಿನ ಘಟನೆಯಾಗಿದೆ.
ಇತ್ತೀಚೆಗೆ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿರುವ ಡೊನಾಲ್ಡ್ ಟ್ರಂಪ್ ಆಡಳಿತದ ಕೆಲ ಹಿರಿಯ ಅಧಿಕಾರಿಗಳು ಈ ಘಟನೆ ಸಂಬಂಧ ಮತ್ತಷ್ಟು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು ಎನ್ನಲಾಗಿದೆ. ಸದ್ಯ ಆಫ್ಘಾನಿಸ್ತಾನದಲ್ಲಿ ಅಮೆರಿಕದ ಸೈನಿಕರ ಸಂಖ್ಯೆನ್ನು 2,500ಕ್ಕೆ ಇಳಿಸಲಾಗಿದೆ ಎಂದು ಪೆಂಟಗಾನ್ ಸ್ಪಷ್ಟಪಡಿಸಿದೆ.