ವಾಷಿಂಗ್ಟನ್:ಕಳೆದ ಎರಡು ದಿನಗಳ ಹಿಂದೆ ಅಮೆರಿಕ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಹಾಗೂ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಪದಗ್ರಹಣ ಮಾಡಿದ್ದು, ವೈಟ್ಹೌಸ್ನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆದಿತ್ತು. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಇದರಲ್ಲಿ ಭಾಗಿಯಾಗಿದ್ದ ನ್ಯಾಷನಲ್ ಗಾರ್ಡ್ ಭದ್ರತಾ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು ಬಹಿರಂಗಗೊಂಡಿದೆ.
ಜೋ ಬೈಡನ್ ಪದಗ್ರಹಣ ಕಾರ್ಯಕ್ರಮದಲ್ಲಿ ಭದ್ರತೆಗಾಗಿ ಭಾಗಿಯಾಗಿದ್ದ 200 ನ್ಯಾಷನಲ್ ಗಾರ್ಡ್ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಗೊಂಡಿದ್ದು, ಯುಎಸ್ ಕಚೇರಿ ಕೂಡ ಖುದ್ದಾಗಿ ಮಾಹಿತಿ ನೀಡಿದೆ ಎಂದು ಅಲ್ಲಿನ ಸುದ್ದಿಸಂಸ್ಥೆವೊಂದು ವರದಿ ಮಾಡಿದೆ.
ಓದಿ: ನಮಸ್ಕಾರ, ಪ್ರೈಮ್ ಮಿನಿಸ್ಟರ್ ಮೋದಿ: ಲಸಿಕೆ ರವಾನಿಸಿದ್ದಕ್ಕಾಗಿ ಬ್ರೆಜಿಲ್ ಅಧ್ಯಕ್ಷರಿಂದ ಧನ್ಯವಾದ!
ಜನವರಿ 6ರಂದು ಯುಎಸ್ ಕ್ಯಾಪಿಟಲ್ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ನ್ಯಾಷನಲ್ ಗಾರ್ಡ್ ಸಿಬ್ಬಂದಿಯನ್ನ ಭದ್ರತೆಗಾಗಿ ನಿಯೋಜನೆ ಮಾಡಲಾಗಿತ್ತು. ಇವರು ಜೋ ಬೈಡನ್ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರಿಂದ ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ಸೋಂಕು ತಗುಲಿರುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅನೇಕರಿಗೆ ರಜೆ ನೀಡಿ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಅಮೆರಿಕದಲ್ಲಿ ಕೋವಿಡ್ನಿಂದ ಸತತ ಎರಡನೇ ದಿನವೂ 4 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ಇದೀಗ ಮೃತರ ಸಂಖ್ಯೆ 4,10,000 ಆಗಿದೆ. ಇದೇ ವಿಚಾರವಾಗಿ ಮಾತಾನಾಡಿರುವ ನೂತನ ಅಧ್ಯಕ್ಷ ಜೋ ಬೈಡನ್ ಕೊರೊನಾ ಸೋಂಕಿನಿಂದ ಅಮೆರಿಕದಲ್ಲಿ 6 ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಬಹುದು ಎಂದಿದ್ದಾರೆ.