ನ್ಯಾಶ್ವಿಲ್ಲೆ (ಅಮೆರಿಕ):ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಮೂಗು ತೂರಿಸುವ ಯಾವುದೇ ರಾಷ್ಟ್ರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವ ಜೋ ಬಿಡನ್ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಡೊನಾಲ್ಡ್ ಟ್ರಂಪ್ ಜೊತೆ ನ್ಯಾಶ್ವಿಲ್ಲೆಯಲ್ಲಿ ನಡೆದ ಅಂತಿಮ ಸಂವಾದದಲ್ಲಿ ಮಾತನಾಡಿದ ಅವರು ಈ ರೀತಿಯಾಗಿ ಎಚ್ಚರಿಕೆ ನೀಡಿದ್ದಾರೆ.
ಕೇವಲ ಮೂರು ದಿನಗಳ ಹಿಂದೆ ಅಮೆರಿಕದ ರಾಷ್ಟ್ರೀಯ ಗುಪ್ತಚರ ಇಲಾಖೆ ನಿರ್ದೇಶಕರಾದ ಜಾನ್ ರ್ಯಾಟ್ಕ್ಲಿಫ್ ರಷ್ಯಾ ಹಾಗೂ ಇರಾನ್ ರಾಷ್ಟ್ರಗಳು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಪ್ರಭಾವ ಬಳಸಲು ಯತ್ನಿಸುತ್ತಿವೆ ಎಂದು ಆರೋಪಿದ್ದರು. ಎಫ್ಬಿಐ ನಿರ್ದೇಶಕ ಕ್ರಿಸ್ ವ್ರೇ ಅವರಿದ್ದ ಸುದ್ದಿಗೋಷ್ಠಿಯಲ್ಲಿ ಜಾನ್ ರ್ಯಾಟ್ಕ್ಲಿಫ್ ಈ ರೀತಿಯ ಹೇಳಿಕೆ ನೀಡಿದ್ದರು.
ಇದರ ಜೊತೆಗೆ ಕೆಲವು ಮತದಾರರ ನೋಂದಾವಣೆ ಮಾಹಿತಿಯನ್ನು ಇರಾನ್ ಹಾಗೂ ರಷ್ಯಾ ಪ್ರತ್ಯೇಕವಾಗಿ ಪಡೆದುಕೊಂಡಿರುವುದು ದೃಢವಾಗಿದೆ ಎಂದು ಜಾನ್ ರ್ಯಾಟ್ಕ್ಲಿಫ್ ಹೇಳಿದ ಹಿನ್ನೆಲೆಯಲ್ಲಿ ಜೋ ಬಿಡೆನ್ ಈ ರೀತಿಯ ಎಚ್ಚರಿಕೆಯನ್ನು ನೀಡಿದ್ದಾರೆ.